ಶಿವಮೊಗ್ಗ: ನಗರದಿಂದ ತಮಿಳುನಾಡಿಗೆ ಓಂ ಶಕ್ತಿ ಯಾತ್ರೆಗೆ ತೆರಳಿ ಹಿಂತಿರುಗಿರುವವರಿಗೆ ಬೈಪಾಸ್ ಹಾಗೂ ಸಹ್ಯಾದ್ರಿ ಕಾಲೇಜು ಬಳಿಯಲ್ಲಿ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತಿದೆ.
ಸುಮಾರು ೮೨ ಬಸ್’ಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ತಮಿಳುನಾಡಿನ ಓಂ ಶಕ್ತಿ ಯಾತ್ರೆಗೆ ತೆರಳಿದ್ದರು. ಇವರುಗಳೆಲ್ಲಾ ಇಂದು ನಸುಕಿನಿಂದ ನಗರಕ್ಕೆ ವಾಪಾಸಾಗುತ್ತಿದ್ದು, ಸಹ್ಯಾದ್ರಿ ಕಾಲೇಜು ಬಳಿ ಬೈಪಾಸ್ ರಸ್ತೆಯಲ್ಲಿ ಬಸ್’ಗಳನ್ನು ನಿಲ್ಲಿಸಿ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತಿದೆ.
ಮೈಸೂರು, ನಂಜನಗೂಡು, ಶ್ರೀರಂಗಂ, ಕುಂಭಕೋಣಂ, ಮೇಲ್ಮರತ್ತೂರು, ತಿರುವಣ್ಣಾಮಲೈ ಸೇರಿದಂತೆ ಹಲವು ತೀರ್ಥಕ್ಷೇತ್ರಗಳಿಗೆ ಇವರು ತೆರಳಿ ಮರಳುತ್ತಿದ್ದಾರೆ.


ಇದೇ ರೀತಿಯ ಮಂಡ್ಯದಿಂದ ಯಾತ್ರೆಗೆ ತೆರಳಿದ್ದವರಲ್ಲಿ ೩೦ಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅವರನ್ನೆಲ್ಲಾ ಐಸೋಲೋಷನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ನಗರದ ಆರಂಭದಲ್ಲಿ ನಾಕಾಬಂಧಿ ಹಾಕಿ ಈ ಬಸ್’ಗಳನ್ನು ಅಲ್ಲಿಯೇ ತಡೆದು ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಲ್ಲರಿಗೂ ಆರ್’ಟಿಪಿಸಿಆರ್ ಪರೀಕ್ಷೆ ನಡೆಸಿ, ಸ್ಯಾನಿಟೈಸ್ ಮಾಡಲಾಗುತ್ತಿದೆ.


ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಯಾತ್ರೆಯಿಂದ ಹಿಂದಿರುಗಿದ ಎಲ್ಲರಿಗೂ ೭ ದಿನಗಳ ಕಾಲ ಹೋಂಕ್ವಾರಂಟೈನ್ ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಕ್ಕೆ ಬಾರದಂತೆ ಸೂಚಿಸಲಾಗಿದೆ. ಒಂದು ವೇಳೆ ಯಾರಿಗಾದರೂ ಜ್ವರ, ಶೀತ, ತಲೆ ನೋವು ಕಾಣಿಸಿಕೊಂಡರೆ ತತಕ್ಷಣವೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!