ಹೊಳೆಹೊನ್ನೂರು: ಸೇವಾ ಮನೋಭಾವನೆಯ ಮೂಲಕ ನಾಯಕತ್ವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಾ ಪೂರ್ಯ ನಾಯ್ಕ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಳೆಹೊನ್ನೂರು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವತಿಯಿಂದ ತಿಮ್ಲಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವ ಸಮೂಹದಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಭಯದ ವಾತಾವರಣ ಕಾಣಿಸುತ್ತದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಕುಂದಿದ್ದು, ಸಣ್ಣಪುಟ್ಟ ಕಾರಣಗಳಿಗೆ ಜಗಳವಾಡುವ ಮೂಲಕ ಯುವಕರು ತಪ್ಪು ದಾರಿಯಲ್ಲಿ ಸಾಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಮಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸುವುದರಿಂದ ಯುವಕರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಶಿಸ್ತು, ಸಂಯಮ, ತಾಳ್ಮೆ ಹಾಗೂ ಹಿರಿಯರ ಗೌರವಿಸುವ ಗುಣಗಳು ಬೆಳೆಯುತ್ತವೆ ಎಂದು ಹೇಳಿದರು.
ಮೊಬೈಲ್ಗಳ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳು ಸಂಬಂಧಗಳಿಂದ ದೂರವಾಗುತ್ತಿದ್ದಾರೆ. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲ ವ್ಯಕ್ತಿತ್ವವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಕೆ.ಆರ್ ಮಾತನಾಡಿ, ತಿಮ್ಲಾಪುರ ಗ್ರಾಮದ ಗ್ರಾಮಸ್ಥರು ನಮ್ಮ ಕಾಲೇಜಿನ ಅಧ್ಯಾಪಕರು ಶಿಬಿರ ನಡೆಸುವ ಬಗ್ಗೆ ಕೇಳಿದಾಗ ತುಂಬು ಹೃದಯದಿಂದ ಒಪ್ಪಿಕೊಂಡು ಉತ್ತಮ ವೇದಿಕೆಯನ್ನು ಸಿದ್ಧಪಡಿಸಿ ಶಿಬಿರ ಯಶಸ್ವಿಯಾಗಿ ಉದ್ಘಾಟನೆಗೊಳ್ಳಲು ಸಹಕರಿಸಿದ್ದಾರೆ ಎಂದು ಹೇಳಿದರು. ಮುಂದಿನ ಏಳು ದಿನಗಳ ಕಾಲ ವಿದ್ಯಾರ್ಥಿಗಳು ಗ್ರಾಮದಲ್ಲಿ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಗ್ರಾಮಸ್ಥರು ಅವರಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜಪ್ಪ ಎಂ ಶಿಬಿರದ ಮಹತ್ವವನ್ನು ವಿವರಿಸಿದರು. ಸಂಗಮ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಧರ್ ಪಾಟೀಲ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮದ ಮುಖಂಡರಾದ ಲೋಕೇಶ್, ರಾಜಯ್ಯ, ಟಿ.ಎಸ್. ಮಂಜುನಾಥ್, ಬಸವನಗೌಡ, ಟಿ.ಪಿ. ರವಿಕುಮಾರ್, ಟಿ.ವಿ. ಮಂಜಪ್ಪ, ಪ್ರಕಾಶ್, ರಘು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಡಾ. ರಾಜುನಾಯ್ಕ್ ಎಸ್ ಅವರು ಸ್ವಾಗತಿಸಿದರು. ಡಾ. ನಾಗರಾಜ್ ನಾಯ್ಕ್ ಎಸ್ ಕಾರ್ಯಕ್ರಮ ನಿರೂಪಿಸಿದರು. ರುದ್ರಮುನಿ ಹೆಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂಗೀತ ಬಗಲಿ ವಂದನಾರ್ಪಣೆ ಸಲ್ಲಿಸಿದರು.