ಶಿವಮೊಗ್ಗ, 06 ಮಾರ್ಚ್ 2026: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್, ಕರ್ನಾಟಕ ಸಂಪೂರ್ಣವಾಗಿ ದಿವಾಳಿಯಾಗಿರುವುದನ್ನು ತೋರಿಸಿದೆ, ರಾಜ್ಯದ ಆರ್ಥಿಕ ಶಿಸ್ತನ್ನು ಗಾಳಿಗೆ ತೂರಲಾಗಿದೆ ಎಂದು ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರ ಟೀಕಿಸಿದ್ದಾರೆ. ಸತತ ಮೂರನೇ ಬಾರಿಗೆ ಬೃಹತ್ ರಾಜಸ್ವ ಕೊರತೆಯ ಬಜೆಟ್ ಮಂಡಿಸುವ ಮೂಲಕ ಕಾಂಗ್ರೆಸ್ ಸರ್ಕಾರ ವಿತ್ತೀಯ ವೈಫಲ್ಯದ ಹ್ಯಾಟ್ರಿಕ್ ಸಾಧಿಸಿದೆ. ರಾಜ್ಯದ ಒಟ್ಟು ಸಾಲ 8,24,389 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಮುಂದಿನ ಪೀಳಿಗೆಯನ್ನು ಸಾಲದ ಸುಳಿಗೆ ತಳ್ಳುವ ಕೆಲಸವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಂಸದ ರಾಘವೇಂದ್ರ ಹರಿಹಾಯ್ದಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್ ನ ಕೇವಲ ಶೇ.16.6ರಷ್ಟು ಮಾತ್ರ ಹಣ ಮೀಸಲಿಟ್ಟಿರುವುದು ಈ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ SCSP/TSP ನಿಧಿಯ ಸುಮಾರು ಶೇ. 97ರಷ್ಟು ಹಣವನ್ನು ಬೇರೆಡೆಗೆ ವರ್ಗಾಯಿಸುವ ಮೂಲಕ ರಾಜ್ಯ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂದು ಸಂಸದರು ಆಕ್ಷೇಪಿಸಿದ್ದಾರೆ. ಅಬಕಾರಿ ಟಾರ್ಗೆಟ್ ಅನ್ನು 45,000 ಕೋಟಿ ರೂ.ಗಳಿಗೆ ಏರಿಸಿ, ಮದ್ಯದ ಕಂಪನಿಗಳಿಗೇ ಬೆಲೆ ನಿರ್ಧರಿಸುವ ಹಕ್ಕು ನೀಡಿರುವುದು ಕಾಂಗ್ರೆಸ್ ಸರ್ಕಾರ ಅಬಕಾರಿ ಇಲಾಖೆಯನ್ನು ತನ್ನ ATM ಆಗಿ ಬಳಸಿಕೊಳ್ಳಲು ಮಾಡಿರುವ ವ್ಯವಸ್ಥಿತ ಸಂಚು ಎಂದು ರಾಘವೇಂದ್ರ ಹೇಳಿದ್ದಾರೆ. ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ನೀಡಲು ಕೇವಲ 25 ಕೋಟಿ ರೂ. ನೀಡಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿರುವ ಅವರು, ಇದು ಈ ಸರ್ಕಾರದ ಆದ್ಯತೆ ಮತ್ತು ಕಾಳಜಿಗಳನ್ನು ತೋರಿಸುತ್ತಿದೆ ಎಂದಿದ್ದಾರೆ. ಒಟ್ಟಾರೆಯಾಗಿ, ಇದು ಕನ್ನಡಿಗರ ಜೇಬಿಗೆ ಕತ್ತರಿ ಹಾಕುವ, ಭವಿಷ್ಯವಿಲ್ಲದ ಕೇವಲ ‘ಗ್ಯಾರಂಟಿ’ ಕೇಂದ್ರಿತ ಸಾಲದ ಬಜೆಟ್ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.