ಶಿವಮೊಗ್ಗ : ನಗರದಲ್ಲಿ ಸಾರ್ವಜನಿಕರಿಗೆ ಬಾಡಿಗೆ ಹೋಗುವ ವೇಳೆ ಮೀಟರ್ ಹಾಕದ ಹಾಗೂ ಈವರೆಗೂ ಮೀಟರ್ ಅಳವಡಿಸದ ಆಟೋ ಚಾಲಕರ ವಿರುದ್ಧ ಪೊಲೀಸರು ಅಭಿಯಾನ ನಡೆಸಿದ್ದು, ಒಂದೇ ತಿಂಗಳಲ್ಲಿ 2 ಲಕ್ಷ ರೂ.ಗೂ ಅಧಿಕ ದಂಡ ಮೊತ್ತ ಸಂಗ್ರಹ ಮಾಡಲಾಗಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ವೀಡಿಯೋ ಮೂಲಕ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಬಾಡಿಗೆ ವೇಳೆ ಮೀಟರ್ ಹಾಕದ ಆಟೋ ಚಾಲಕರ ವಿರುದ್ಧ ಪೊಲೀಸ್ ಇಲಾಖೆಯಿಂದ ಕಳೆದ ನವೆಂಬರ್ 15ರಿಂದ ಡಿಸೆಂಬರ್ 15ರವರೆಗೂ ಡ್ರೈವ್ ನಡೆಸಲಾಗಿತ್ತು. ಈ ಅವಧಿಯಲ್ಲಿ ಒಟ್ಟು528 ಪ್ರಕರಣ ಆಟೋ ಚಾಲಕರ ವಿರುದ್ಧ ದಾಖಲಾಗಿದ್ದು, ಬರೋಬ್ಬರಿ 2,40,900 ರೂಪಾಯಿ ದಂಡ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಎಲ್ಲ ಚಾಲಕರು ತಮ್ಮ ಆಟೋಗಳಿಗೆ ಮೀಟರನ್ನುಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಪ್ರಯಾಣಿಕರನ್ನು ಕೂರಿಸಿಕೊಂಡು ಬಾಡಿಗೆ ಹೋಗುವ ವೇಳೆ ಕಡ್ಡಾಯವಾಗಿ ಮೀಟರನ್ನುಹಾಕಬೇಕು. ಇಲ್ಲದೇ ಹೋದಲ್ಲಿ ಅಂತಹವರಿಗೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇನ್ನು, ಸಾರ್ವಜನಿಕರೂ ಸಹ ತಾವು ಆಟೋವನ್ನು ಬಾಡಿಗೆಗೆ ಪಡೆಯುವ ವೇಳೆ ಕಡ್ಡಾಯವಾಗಿ ಮೀಟರ್ ಹಾಕುವಂತೆ ಚಾಲಕರಿಗೆ ಹೇಳಬೇಕು. ಒಂದು ವೇಳೆ ಅದಕ್ಕೆ ನಿರಾಕರಿಸಿದರೆ 112 ಸಂಖ್ಯೆಗೆ ಕೂಡಲೇ ಕರೆ ಮಾಡಿ ದೂರು ದಾಖಲಿಸಿ ಎಂದು ಸಂದೇಶ ನೀಡಿದ್ದಾರೆ.
ರೈಲ್ವೆ ನಿಲ್ದಾಣದ ಬಳಿ ಮೈಕ್’ನಲ್ಲಿ ಸಂದೇಶ
ಇನ್ನು, ಶಿವಮೊಗ್ಗ ನಗರ ಮುಖ್ಯ ರೈಲ್ವೆ ನಿಲ್ದಾಣಕ್ಕೆ ರೈಲುಗಳು ಆಗಮಿಸಿದ ವೇಳೆ ಜನದಟ್ಟಣೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬಹಳಷ್ಟು ಆಟೋ ಚಾಲಕರು ಮನಸ್ಸಿಗೆ ಬಂದಷ್ಟು ಹಣ ಕೇಳುತ್ತಾರೆ ಎಂಬ ಅರೋಪಗಳು ಕೇಳಿ ಬರುತ್ತವೆ.
ಇಂತಹ ಆರೋಪಗಳ ಹಿನ್ನೆಲೆಯಲ್ಲಿ ರೈಲುಗಳು ಆಗಮಿಸುವ ವೇಳೆಯಲ್ಲಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಉಪಸ್ಥಿತರಿರುವ ಪೊಲೀಸರು ಆಟೋ ಚಾಲಕರು ಕಡ್ಡಾಯವಾಗಿ ಮೀಟರ್ ಹಾಕುವಂತೆ ಮೈಕ್ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.
ಪ್ರಯಾಣಿಕರನ್ನು ಹತ್ತಿಸಿಕೊಂಡು ಬಾಡಿಗೆಗೆ ತೆರಳುವ ವೇಳೆ ಕಡ್ಡಾಯವಾಗಿ ಮೀಟರ್ ಹಾಕಬೇಕು, ಪ್ರಯಾಣಿಕರೂ ಸಹ ಮೀಟರ್ ಹಾಕಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಂದೇಶ ನೀಡುತ್ತಿದ್ದಾರೆ. ಅಲ್ಲದೇ, ಜನದಟ್ಟಣೆ ಹೆಚ್ಚಾದ ಸಂದರ್ಭದಲ್ಲಿ ಉಂಟಾಗುವ ಗೊಂದಲ ತಡೆಯಲು ಆಟೋ ಬಾಡಿಗೆ ಪಡೆಯುವ ಪ್ರಯಾಣಿಕರ ಸರತಿ ಸಾಲಿನಲ್ಲಿ ಬಂದು ಆಟೋ ಹತ್ತುವಂತೆಯೂ ಸಹ ಪೊಲೀಸರು ಕ್ರಮಕೈಗೊಂಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.