ಶಿವಮೊಗ್ಗ : ಅಡುಗೆ ಅನಿಲ ಬೆಲೆಯನ್ನು ಏರಿಸಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿವತಿಯಿಂದ ಇಂದು ಸೀನಪ್ಪಶೆಟ್ಟಿ (ಗೋಪಿ)ವೃತ್ತದಲ್ಲಿ ಸೌದೆ ಒಲೆಯನ್ನು ಹಚ್ಚಿ ಟೀ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳನ್ನು ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಗಧಾಪ್ರಹಾರ ಮಾಡುತ್ತಿದ್ದು, ಇದನ್ನು ಜಿಲ್ಲಾ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತೆರಿಗೆ ಹೊರೆ ಅಧಿಕವಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಬಡ ಮತ್ತು ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಹಾಗೂ ಮಧ್ಯಮವರ್ಗದ ಕುಟುಂಬಗಳ ಮೇಲೆ ಭಾರೀ ಹೊರೆಯಾಗಿವೆ. ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಡುಗೆ ಅನಿಲದ ಬೆಲೆಯನ್ನು ರೂ.60 ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 115 ರೂ.ಗಳಿಗೆ ಹೆಚ್ಚಿಸಿರುವುದು ಖಂಡನೀಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಉದ್ಯೋಗ ಸೃಷ್ಟಿಮಾಡುವುದನ್ನಾಗಲೀ, ಜನಸಾಮಾನ್ಯರ ಜೀವನವನ್ನು ಸರಳಗೊಳಿಸುವ ಕೆಲಸವನ್ನಾಗಲಿ ಮಾಡುತ್ತಿಲ್ಲ. ಬದಲಿಗೆ ಜನರಿಂದ ಮಿತಿಮೀರಿ ತೆರಿಗೆ ವಸೂಲು ಮಾಡುವ ಮೂಲಕ ಜನರನ್ನು ಸುಲಿಗೆ ಮಾಡಲು ಹೊರಟಿದೆ ಎಂದು ದೂರಿದರು.
ರಾಷ್ಟ್ರಪತಿಗಳು ಮಧ್ಯಪ್ರವೇಶಮಾಡಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಲು ನಿರ್ದೇಶನ ನೀಡಬೇಕು. ಇಲ್ಲವೇ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೋಗೆಯಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಜವಳಿ ನಿಗಮದ ಅಧ್ಯಕ್ಷ ಕೆ. ಚೇತನ್ಗೌಡ, ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಹರ್ಷಿತ್ಗೌಡ, ನಗರಾಧ್ಯಕ್ಷ ಚರಣ ಜೆ.ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ. ಯೋಗೀಶ್, ಪ್ರಮುಖರಾದ ಮಧು, ಶಿವಕುಮಾರ್, ಸುವರ್ಣನಾಗರಾಜ್, ಚಿನ್ನಪ್ಪ, ವಿಜಯ್ ಸೇರಿದಂತೆ ಹಲವರಿದ್ದರು.