ಶಿವಮೊಗ್ಗ: ಇತಿಹಾಸದ ಎಲ್ಲಾ ಕಾಲಘಟ್ಟದಲ್ಲಿ ಮಹಿಳೆಯು ಸಮಾಜದ ಬೆಳವಣಿಗೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪಾತ್ರ ಅತ್ಯಗತ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಎಂ.ಆರ್.ಸೀತಾಲಕ್ಷ್ಮೀ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಇಂಡಿಯನ್ ಫಾರ್ಮಸಿ ಗ್ರಾಜುಯೇಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಟುಂಬದ ಬೆಳವಣಿಗೆ, ಸಂಸ್ಕೃತಿ ಸಂರಕ್ಷಣೆ ಮತ್ತು ಸಮಾಜದ ನೈತಿಕ ಮೌಲ್ಯಗಳ ಉಳಿವಿನಲ್ಲಿ ಮಹಿಳೆಯ ಪಾತ್ರ ಸದಾ ಪ್ರಮುಖವಾಗಿದೆ. ಮಹಿಳೆಯರು ತಮ್ಮ ಸಾಮರ್ಥ್ಯ ಮತ್ತು ಮೌಲ್ಯವನ್ನು ಅರಿತು ಆತ್ಮವಿಶ್ವಾಸದಿಂದ ಮುಂದೆ ಬಂದು ಸಮಾಜದ ಅಭಿವೃದ್ಧಿಗೆ ತಮ್ಮ ಮಹತ್ವದ ಕೊಡುಗೆಯನ್ನು ನೀಡಬೇಕು ಎಂದು ಪ್ರೇರೇಪಿಸಿದರು.

ಮುಖ್ಯ ಅತಿಥಿಗಳಾದ ಖ್ಯಾತ ಸ್ತ್ರೀ ಹಾಗೂ ಪ್ರಸೂತಿ ತಜ್ಞರಾದ ಡಾ.ಸ್ವಾತಿ ಕಿಶೋರ್ ಮಾತನಾಡಿ, ಸಮತೋಲನಯುತ ಜೀವನಶೈಲಿ, ನಿಯಮಿತ ಆರೋಗ್ಯ ಪರೀಕ್ಷೆಗಳು, ಒತ್ತಡ ನಿರ್ವಹಣೆ ಹಾಗೂ ಸ್ವಯಂ ಆರೈಕೆಯ ಅಗತ್ಯತೆಯನ್ನು ವಿವರಿಸಿದರು.
ಬೆಂಗಳೂರಿನ ಔಷಧ ನಿರೀಕ್ಷಕರಾದ ನಂದಿನಿ ಎನ್ ಮಾತನಾಡಿ, ಮಹಿಳೆಯರು ತಮ್ಮ ವೈಯಕ್ತಿಕ ಅಭಿವೃದ್ಧಿಯೊಂದಿಗೆ, ಇತರರಿಗೂ ಜ್ಞಾನ, ಅವಕಾಶ ಮತ್ತು ಬೆಂಬಲವನ್ನು ಹಂಚಿಕೊಳ್ಳುವ ಮೂಲಕ ಸಮಾಜವನ್ನು ಇನ್ನಷ್ಟು ಬಲಿಷ್ಠವಾಗಿಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎನ್.ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು. ಸಂಜನಾ ನಿರೂಪಿಸಿ, ಡಾ.ಶಾಂಭವಿ ಸ್ವಾಗತಿಸಿ, ಕೀರ್ತನ ಪ್ರಾರ್ಥಿಸಿ, ಪ್ರಿಯಾಂಕ ವಂದಿಸಿದರು.