ಶಿವಮೊಗ್ಗ ಡಿ.18 : ಉನ್ನತ ಶಿಕ್ಷಣ ಪಡೆದು ಉತ್ತಮ ಸಂಬಳದ ನೌಕರಿ ಪಡೆಯುವುದಷ್ಟೇ ವಿದ್ಯಾರ್ಥಿಗಳ ಜೀವನದ ಗುರಿಯಾಗಬಾರದು. ನಾವು ಉತ್ತಮ ವಾತಾವರಣದಲ್ಲಿ ಆರೋಗ್ಯಯುತವಾಗಿ ಜೀವಿಸಲು ಮಾಲಿನ್ಯ ರಹಿತ ಪರಿಸರ ಅಗತ್ಯ. ಆದ್ದರಿಂದ ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕೆಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ವಿ. ನಾಗೇಶ್ ಮನವಿ ಮಾಡಿದರು.
ನಗರದ ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳುರ ಇಂದು ಬೆಳಿಗ್ಗೆ ತಾಲೂಕಿನ ಅಬ್ಬಲಗೆರೆ ಬಳಿಯ ಈಶ್ವರವನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಕೃತಿ ಮಹತ್ವ ಕುರಿತು ಅವರು ವಿವರ ನೀಡಿದರು.
ಪರಿಸರದಲ್ಲಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರದಿಂದ ಅತಿ ಹೆಚ್ಚು ಪ್ರಯೋಜನ ಪಡೆಯುತ್ತಿರುವುದಲ್ಲದೆ ಮಾಲಿನ್ಯವನ್ನು ಮಿತಿಮೀರಿ ಮಾಡುತ್ತಿದ್ದಾನೆ. ಮನುಷ್ಯ ಪ್ರಕೃತಿಗೆ ಕೃತಜ್ಞರಾಗಿ, ಪರಿಸರಕ್ಕೆ ಪೂರಕವಾಗಿ ಬದುಕಿದರೆ ಮಾತ್ರ ಮನುಕುಲವಷ್ಟೇ ಅಲ್ಲ ಜೀವ ಸಂಕುಲ ಬದುಕಲು ಸಾಧ್ಯವೆಂದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ತುಳಸಿಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಹೆಚ್.ಎಂ. ಮಹೇಶ್ವರಪ್ಪ, ಪರಿಸರ ಜನಾರ್ಧನ ಪೈ ಉಪಸ್ಥಿತರಿದ್ದರು.