ಶಿವಮೊಗ್ಗ : ನಗರದ ಪ್ರಮುಖ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮತ್ತು ಫುಟ್ಪಾತ್ ಅತಿಕ್ರಮಣ, ಬೀದಿಬದಿ ವ್ಯಾಪಾರಸ್ಥರಿಂದ ತಮ್ಮ ತಿಂಡಿಗಾಡಿಗಳ ನಿಲುಗಡೆ ಯಥಾಪ್ರಕಾರ ಮುಂದುವರೆದಿದ್ದು, ಸಂಚಾರಿ ಪೊಲೀಸರು ಪದೇ ಪದೇ ತೆರವುಗೊಳಿಸಿ, ಎಷ್ಟೇ ಬಿಗಿನಿಲುವು ಪ್ರದರ್ಶಿಸಿದರೂ ಮತ್ತೆ ಯಥಾಸ್ಥಿತಿ ಮುಂದುವರೆದಿದ್ದು, ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ನಗರದ ಗಾಂಧಿಬಜಾರ್ನ ಕಸ್ತೂರ ಬಾ ರಸ್ತೆಯಲ್ಲಿ ಮತ್ತೆ ಯಥಾಸ್ಥಿತಿ ಮುಂದುವರೆದಿದ್ದು, ಯದ್ವಾತದ್ವಾ ಅತಿಕ್ರಮಣವಾಗಿದೆ. ನಗರದ ಕೆಆರ್ಪುರಂ ರಸ್ತೆಯಲ್ಲಂತೂ ಗ್ಯಾರೇಜ್ಗಳ ಮುಂದೆ ಹತ್ತಾರು ವಾಹನಗಳನ್ನು ನಿಲ್ಲಿಸಿ ರಸ್ತೆಯ ಅತಿಕ್ರಮಣ ಮಾಡಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರತಿನಿತ್ಯ ಸಣ್ಣ-ಪುಟ್ಟ ಅಘಘಾತವಾಗುತ್ತಿದ್ದು ಮಾತಿನ ಚಕಮಕಿ ನಡೆಯುತ್ತಿದೆ. ವಾಸ್ತವವಾಗಿ ಈ ರಸ್ತೆಯಲ್ಲಿ ಅನೇಕ ಬಾರಿ ಸಣ್ಣ ಘಟನೆಗಳು ದೊಡ್ಡದಾಗಿ ಬೇರೆಯೇ ತಿರುವು ಪಡೆದ ಘಟನೆಯೂ ಆಗಿದೆ. ಈ ರಸ್ತೆಯಲ್ಲಿ ಅಂಗಡಿ ಮಾಲೀಕರು ಮನಸ್ಸೋ ಇಚ್ಛೆ ತಮ್ಮ

ಅಂಗಡಿಯ ಬೋರ್ಡ್ಗಳನ್ನು ರಸ್ತೆಯಲ್ಲಿ ಇಡುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಾಫಿಕ್ ಪೊಲೀಸರು ಕೂಡಲೇ ಕಠಿಣ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಫುಟ್ಪಾತ್ ಮತ್ತು ರಸ್ತೆಯನ್ನು ಅತಿಕ್ರಮಿಸಿದ ಬೋರ್ಡ್ಗಳನ್ನು ತೆರೆವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.