ಬೆಂಗಳೂರು: ಶಿವಮೊಗ್ಗ ನಗರದ ಕ್ಯಾನ್ಸರ್ ಪೀಡಿತ ರೋಗಿಗಳ ಶಸ್ತ್ರಚಿಕಿತ್ಸೆ ಹಾಗೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ಕೋರಿ ಶಿವಮೊಗ್ಗ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಶಿವಮೊಗ್ಗದ ಶಾಸಕರ ಕಛೇರಿಯಾದ ಕರ್ತವ್ಯ ಭವನಕ್ಕೆ ಕಳೆದ ಕೆಲವು ದಿನಗಳಿಂದ ಅನೇಕ ನಿವಾಸಿಗಳು ಭೇಟಿ ನೀಡಿ, ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ತಮ್ಮ ಕುಟುಂಬದ ಸದಸ್ಯರ ಶಸ್ತ್ರಚಿಕಿತ್ಸೆಗೆ ನೆರವಾಗುವಂತೆ ಅಹವಾಲು ಸಲ್ಲಿಸಿದ್ದರು. ಬಡ ಮತ್ತು ಮಧ್ಯಮ ವರ್ಗದ ಈ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಭರಿಸುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ, ಶಾಸಕರು ಇಂದು ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದರು.
“ಕ್ಯಾನ್ಸರ್ ಪೀಡಿತ ರೋಗಿಗಳ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದೆ. ಆದ್ದರಿಂದ ‘ಮುಖ್ಯಮಂತ್ರಿ ಪರಿಹಾರ ನಿಧಿ’ಯ (CMRF) ಅಡಿಯಲ್ಲಿ ಆದ್ಯತೆಯ ಮೇರೆಗೆ ಆರ್ಥಿಕ ಸಹಾಯವನ್ನು ಮಂಜೂರು ಮಾಡಿ, ರೋಗಿಗಳ ಪ್ರಾಣ ಉಳಿಸಲು ಸಹಕರಿಸಬೇಕು” ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿದರು.