ಸಾಗರ : ಪೋಷಕರು ಮಕ್ಕಳಿಗೆ ಒಂದಷ್ಟು ಸಮಯವನ್ನು ಕೊಡಬೇಕು. ಕಲಿಕೆ ಸಂದರ್ಭದಲ್ಲಿ ಅವರ ಮೇಲೆ ಅತಿಯಾದ ಒತ್ತಡ ಹಾಕುವುದಕ್ಕಿಂತ ಅವರ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ತಾಲ್ಲೂಕಿನ ಹಳ್ಳಿಬೈಲು ಗ್ರಾಮದಲ್ಲಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಅತಿಯಾದ ಒತ್ತಡವಿದ್ದರೆ ಮಕ್ಕಳು ನಿರೀಕ್ಷಿತ ಫಲಿತಾಂಶ ಪಡೆಯಲು ಆಗುವುದಿಲ್ಲ. ಮಕ್ಕಳಿಗೆ ಗುಣiಟ್ಟದ ಶಿಕ್ಷಣ ಕೊಡಿಸಲು ಪೋಷಕರು ಪ್ರಾಮಾಣಿಕ ಪ್ರಯತ್ನ ಪಡೆಬೇಕು. ಬಡತನದಲ್ಲಿ ಹುಟ್ಟಿ ಆದರೆ ಬಡತನದಲ್ಲಿಯೆ ಸಾಯಬೇಕೆಂದಿಲ್ಲ. ನಮ್ಮ ಮಕ್ಕಳ ಮೂಲಕ ನಾವು ಉಜ್ವ ಭವಿಷ್ಯ ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕು. ಪ್ರಸ್ತುತ ದಿನಮಾನಗಳಲ್ಲಿ ಎಲ್ಲ ಭಾಷೆ ಕಲಿಕೆಯೂ ಅನಿವಾರ್ಯವಾಗಿದೆ. ಹೊರದೇಶಕ್ಕೆ ಹೋದಾಗ ಮಾತ್ರ ಭಾರತದ ಮಹತ್ವ ಗೊತ್ತಾಗುತ್ತದೆ. ಶಿಕ್ಷಣದ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ ವಿಚಾರದಲ್ಲಿ ಸಹ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿ, ಅಲ್ಪಸಂಖ್ಯಾತ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುನ್ನಲೆಗೆ ಬರಬೇಕು ಎನ್ನುವ ಉದ್ದೇಶದಿಂದ ಹಳ್ಳಿಬೈಲ್‌ನಲ್ಲಿ ಉರ್ದು ಶಾಲೆ ಪ್ರಾರಂಭ ಮಾಡಿರುವ ಹಿರಿಯರ ಆಲೋಚನಾ ಕ್ರಮ ನಿಜಕ್ಕೂ ಪ್ರಶಂಸನೀಯವಾಗಿದೆ. ಸರ್ಕಾರಿ ಉರ್ದು ಶಾಲೆ ೭೫ ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದುರ.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುಲ್ ಮತೀನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಳದಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮ, ಉಪಾಧ್ಯಕ್ಷೆ ಸವಿತಾ ಗೋಪಾಲ್, ಪ್ರಮುಖರಾದ ಮಹ್ಮದ್ ಯಾಸೀನ್, ಮಹ್ಮದ್ ಯಾಹ್ಯಾ, ಇರ್ಫಾನ್ ಅಹ್ಮದ್, ಜಿ.ಯಾಕೂಬ್, ಸೈಯದ್ ಇಕ್ಬಾಲ್ ಸಾಬ್, ಆರ್.ಕೆ.ಫಯಾಜ್, ಸೈಯದ್ ತಾಹೀರ್, ಕೆ.ಎಸ್.ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಜಾಕೀರ್ ಹುಸೇನ್, ದಸ್ತಗೀರ್, ಅಸ್ಪಾಕ್ ಅಹ್ಮದ್ ಇನ್ನಿತರರು ಹಾಜರಿದ್ದರು.