ಸಾಗರ : ಶಿಕ್ಷಣ ಪಡೆಯುವುದರ ಮೂಲಕ ನಾವು ಉದ್ಯೋಗಸ್ಥರಾಗುವುದು ದೊಡ್ಡ ಸಾಧನೆಯಲ್ಲ. ನಾವು ಶಿಕ್ಷಣ ಪಡೆದು ಹೆಚ್ಚೆಚ್ಚು ಉದ್ಯೋಗವನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾವಂತರಾಗುವ ಜೊತೆಗೆ ಉದ್ಯೋಗಧಾತರಾಗಬೇಕು ಎಂದರು.
ಒಂದು ಶಾಲೆಗೂ ದೇವರಿರುವ ಗುಡಿಗೂ ವ್ಯತ್ಯಾಸವಿಲ್ಲ. ಆಧುನಿಕತೆ ಶಿಕ್ಷಣ ಕ್ಷೇತ್ರಕ್ಕೂ ಹಲವು ಕೊಡುಗೆ ನೀಡಿದೆ. ಬದಲಾದ ಕಾಲಘಟ್ಟದಲ್ಲಿ ಹೊಸಹೊಸ ಯೋಜನೆಗಳನ್ನು ನಮ್ಮ ಏಳಿಗೆಗೆ ಬಳಸಿಕೊಳ್ಳಬೇಕು. ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಎಲ್ಲ ಸೌಲಭ್ಯವೂ ಇದೆ ಎನ್ನುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದ ಶಾಲೆ ಅಮೃತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮಾಜಿ ಸಚಿವ ಎಚ್. ಹಾಲಪ್ಪ ಹರತಾಳು ಮಾತನಾಡಿ, ಓಡಾಡಲು ದಾರಿಯಿಲ್ಲದ ಕಾಲದಲ್ಲಿ ಹಳ್ಳಿಗಾಡಿನಲ್ಲಿ ಇಂತಹ ಶಾಲೆಗಳನ್ನು ರೂಪಿಸಿದ ಹಿಂದಿನ ದಿನಗಳ ಮಹನೀಯರನ್ನು, ಆ ದಿನಗಳಲ್ಲಿ ಎಲ್ಲೆಲ್ಲಿಂದಲೋ ಬಂದು ಕನಿಷ್ಠ ವೇತನಕ್ಕೆ ದುಡಿದ ಗುರುಗಳನ್ನು ನೆನಪಿಸಿಕೊಳ್ಳುವ ದಿನವಿದು. ಅನ್ನ ಅವತ್ತಿನ ಸಮಸ್ಯೆ. ಆದರೆ ಅಕ್ಷರ ಕಲಿಕೆಯಲ್ಲಿ ಅನ್ನವಿದೆ ಎಂದು ಹೇಳಿಕೊಟ್ಟವರು ಶಿಕ್ಷಕರು. ಆ ಅರಿವು ಸದಾ ನಮ್ಮೊಂದಿಗಿರಬೇಕು ಎಂದರು.
ಅಂಗೈನಲ್ಲಿ ಈಗ ಪ್ರಪಂಚವಿದೆ. ತಂತ್ರಜ್ಞಾನ ಹಲವು ಅವಕಾಶಗಳನ್ನು ನಮಗೆ ಒದಗಿಸಿದೆ. ಅದಕ್ಕೆ ತಕ್ಕಂತೆ ಈಗಿನ ಶಿಕ್ಷಣ ಬದಲಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದುವ ತಮ್ಮ ಮಕ್ಕಳ ವಿಚಾರದಲ್ಲಿ ಪೋಷಕರು ನಿರ್ಲಕ್ಷ್ಯ ಮಾಡುವುದನ್ನು ಕಾಣುತ್ತೇವೆ. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಇರುವ ಮನೋಭಾವ ಬದಲಾಗಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ದೊಂಬೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ವಿ.ನಾ.ಕೃಷ್ಣಮೂರ್ತಿ, ವರದಪುರದ ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷರಾದ ಎಂ.ಜಿ. ಕೃಷ್ಣಮೂರ್ತಿ, ಹೋಟೆಲ್ ಉದ್ಯಮಿ ಎಸ್.ಕೆ.ಚಂದ್ರು, ಮುಖ್ಯ ಶಿಕ್ಷಕ ಸತ್ಯಪ್ಪ, ಕೆ.ಎನ್. ತಿಮ್ಮಣ್ಣಭಟ್, ಸುರೇಶ್ ಶೆಟ್ಟಿ ಇತರರು ಇದ್ದರು.
ಕೃಷ್ಣವೇಣಿ ಪ್ರಾರ್ಥಿಸಿದರು. ಡಾ. ಜಯಪ್ರಕಾಶ್ ಮಾವಿನಕುಳಿ ಸ್ವಾಗತಿಸಿದರು. ರಾಜೇಂದ್ರ ಬಿ.ಪಿ. ವಂದಿಸಿದರು. ಸಿರಿವಂತೆ ಸತ್ಯನಾರಾಯಣ ನಿರೂಪಿಸಿದರು.