ಶಿವಮೊಗ್ಗ : ಸಿಎಂ ಸಿದ್ದರಾಮಯ್ಯ ಶುಕ್ರವಾರ 4.48 ಲಕ್ಷ ಕೋಟಿ ರೂಪಾಯಿ ಮೊತ್ತದ ರಾಜ್ಯ ಬಜೆಟ್ ಮಂಡಿಸಿದರೂ ಇದೊಂದು ಜನವಿರೋಧಿ ಹಾಗೂ ಶಿವಮೊಗ್ಗದ ಅಭಿವೃದ್ಧಿಗೆ ಶೂನ್ಯ ಕೊಡುಗೆ ನೀಡಿದ ಬಜೆಟ್ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಾಗ್ಧಾಳಿ ನಡೆಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂದೆಡೆ ಸಿದ್ದರಾಮಯ್ಯನವರ ದಾಖಲೆಯ 17ನೇಯ ಬಜೆಟ್ ಇದಾಗಿದ್ದು, ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇನ್ನೊಂದೆಡೆ ಕಳೆದ ಮೂರು ವರ್ಷಗಳಿಂದ ಶಿವಮೊಗ್ಗ ಅಭಿವೃದ್ಧಿಗೆ ಬಜೆಟ್ನಲ್ಲಿ ನಿರಂತರವಾಗಿ ಯಾವುದೇ ಅನುದಾನವನ್ನು ನೀಡದೆ ದಾಖಲೆ ಮಾಡಿದ್ದಾರೆ ಎಂದು ಲೇವಡಿ ಮಾಡಿದ ಅವರು, ಈ ದಾಖಲೆಗೆ ನಮ್ಮ ಸಹಮತವಿಲ್ಲ. ಈ ಹಿಂದೆ ಯಡಿಯೂರಪ್ಪ ಅವರು ಜಿಲ್ಲೆಗೆ ನೀಡಿದ ಅನುದಾನವನ್ನು ಗಮನಿಸಿಯಾದರೂ ಸಿದ್ಧರಾಮಯ್ಯ ಇಲ್ಲಿಯ ಪ್ರಗತಿಗೆ ಸಹಕರಿಸಬೇಕಾಗಿತ್ತು. ಮಲೆನಾಡಿನ ಭಾಗಕ್ಕೆ ಏನನ್ನೂ ಕೊಡಬಾರದೆಂಬ ತೀರ್ಮಾನಕ್ಕೆ ಅವರು ಬಂದಂತೆ ಕಾಣುತ್ತದೆ ಎಂದು ಟೀಕಿಸಿದರು.
ತಮ್ಮ ಮೂರು ವರ್ಷಗಳ ಬಜೆಟ್ನಲ್ಲಿ ಮಲೆನಾಡು. ಅದರಲ್ಲಿಯೂ ಶಿವಮೊಗ್ಗವನ್ನು ಸೈಡ್ಲೈನ್ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದ ಅವರು, ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಪ್ರತ್ಯೇಕ ಜಿಲ್ಲಾಸ್ಪತ್ರೆ, ಪ್ರತ್ಯೇಕ ಪೊಲೀಸ್ ಕಮೀಷನರೇಟ್, ಆಯುಷ್ ವಿವಿಗೆ 100 ಎಕರೆ ಭೂಮಿ ಮಂಜೂರಾಗಿದ್ದರೂ ಅದಕ್ಕೆ ಅನುದಾನ ಘೋಷಣೆ ಮಾಡದೇ ಇರುವುದು, ಪೌರ ಕಾರ್ಮಿಕರ ಖಾಯಮಾತಿ, ಜಿಲ್ಲಾಡಳಿತ ಭವನ, ಕೊಳಚೆ ಪ್ರದೇಶ ಅಭಿವೃದ್ಧಿ, ನೆಹರೂ ಕ್ರೀಡಾಂಗಣದ ಅಭಿವೃದ್ಧಿ, ಕೈಗಾರಿಕಾ ಕಾರಿಡಾರ್, ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್, ಅಡಿಕೆ ಬೆಳೆಗಾರರ ಸಮಸ್ಯೆಯಾದ ಎಲೆಚುಕ್ಕೆ ರೋಗ ಸಂಶೋಧನೆಗೆ ಹಣ ಬಿಡಗಡೆ ಮಾಡದೇ ಇರುವುದು ಶಿವಮೊಗ್ಗಕ್ಕೆ ಅಗತ್ಯವಿರುವ ಇನ್ನೂ ಎರಡು ಬಸ್ಡಿಪೋ ಸ್ಥಾಪನೆ, ನಗರಕ್ಕೆ ಕನಿಷ್ಠ 20 ಬಸ್ ಕಲ್ಪಿಸುವುದು, ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣ, ವಿದ್ಯುತ್ ಪ್ರಸರಣ ಕೇಂದ್ರದ ಸ್ಥಾಪನೆ ಸೇರಿದಂತೆ ಹಲವಾರು ಬೇಡಿಕೆಗಳಿಗೆ ಬಜೆಟ್ನಲ್ಲಿ ನಯಾಪೈಸೆಯನ್ನು ಘೋಷಣೆ ಮಾಡದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೂ ಸಿಗದಂತೆ ನೋಡಿಕೊಂಡರು ಅದಕ್ಕಾಗಿ ಅವರಿಗೆ ಪ್ರಶಸ್ತಿ ಕೊಡುವ ಅಗತ್ಯವಿದೆ ಎಂದು ವ್ಯಂಗ್ಯವಾಡಿದರು.
ಬಜೆಟ್ನಲ್ಲಿ ಕೇವಲ ಅಲ್ಪಸಂಖ್ಯಾತರ ತುಷ್ಠೀಕರಣ ಕಾಣುತ್ತಿದ್ದು, ದೇವಾಲಯದ ಹಣ ನಮ್ಮ ಹಕ್ಕು ಅದನ್ನು ನಾವು ಕೇಳುವುದರಲ್ಲಿ ತಪ್ಪೇನಿದೆ ಎಂದ ಅವರು, ನಗರದ ಹೊರವಲಯದಲ್ಲಿರುವ ಹರಕೆರೆ ದೇವಸ್ಥಾನ ಅಭಿವೃದ್ಧಿಗೆ ಮುಜರಾಯಿ ಖಾತೆಯಿಂದ 2 ಕೋಟಿ ರೂ. ಅನುದಾನ ನೀಡುವಂತೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ವಿನಂತಿಸಿದರೂ ಕವಡೆಕಾಸು ಕೂಡ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬಜೆಟ್ನಲ್ಲಿ ಕೇಂದ್ರ ಸರ್ಕಾರವನ್ನು ದೂರುವ ಕೆಲಸಬಿಟ್ಟು ಕೇಂದ್ರದಿಂದ ರಾಜ್ಯಕ್ಕೆ ಬಂದ ಅನುದಾನದ ಹಣದ ಬಗ್ಗೆ ಸ್ಪಷ್ಟಮಾಹಿತಿ ಕೊಡಿ ಎಂದು ಸವಾಲು ಹಾಕಿದರು.
ವಿಜಯಪುರ, ಚುನಾವಣಾ ಸಂದರ್ಭದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ 1ಲಕ್ಷ ರೂ. ನೀಡುತ್ತೇನೆಂದು ಭರವಸೆ ನೀಡಿದ ನೀವು ಬಜೆಟ್ನಲ್ಲಿ ಆ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ. ಕಳೆದ ಚುನಾವಣೆ ಸಂದರ್ಭದಲ್ಲಿ ತಾವೇ ನೀಡಿದ ಪಂಚಗ್ಯಾರೆಂಟಿಯಲ್ಲಿ ಒಂದಾದ ಯುವ ನಿಧಿಗೆ ಹಣ ಮೀಡಲಿಟ್ಟಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರೊ.ಗೋವಿಂದರಾಜ್ ಸಮಿತಿ ವರದಿ ನೆಪವೊಡ್ಡಿ ಬಜೆಟ್ ಮಂಡಿಸಿದ್ದೀರಿ. ಈ ಭಾಗದ ತುಂಗಾ-ಭದ್ರಾ ನದಿಯ ಸ್ವಚ್ಛತೆಗಾಗಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಪರಿಸರಾಸಕ್ತರು, ಶೃಂಗೇರಿಯಿಂದ ಹರಿಹರದ ಮೂಲಕ ಕಿಷ್ಕಿಂದೆ ಮಾರ್ಗವಾಗಿ ಮಂತ್ರಾಲಯದವರೆಗೆ ಜಾಗೃತಿ ಪಾದಯಾತ್ರೆ ಹಮ್ಮಿಕೊಂಡು ನಿಮ್ಮ ಗಮನ ಸೆಳೆದು, ಆ ಸಂದರ್ಭದಲ್ಲಿ ನದಿ ಸ್ವಚ್ಛತೆಗೆ ಹಣ ನೀಡುವುದಾಗಿ ಭರವಸೆಕೊಟ್ಟ ತಾವು ಅದನ್ನು ಈಡೇರಿಸಿಲ್ಲ ಎಂದು ಸಿಡಿಮಿಡಿಗೊಂಡರು.
ದ್ವೇಷ ಭಾಷಣ ನಿಯಂತ್ರಿಸಲು ಕರಾವಳಿ ಭಾಗ ಸೇರಿದಂತೆ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸಲು ಉತ್ಸುಕರಾಗಿರುವ ತಾವು ಇನ್ನಾದರೂ ಬರುವ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಲೆನಾಡಿಗೆ ನ್ಯಾಯಕೊಡುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಮೋಹನ್ರೆಡ್ಡಿ, ಪ್ರಮುಖರಾದ ಎಸ್. ಜ್ಞಾನೇಶ್ವರ್, ದೀನ್ದಯಾಳ್, ಶ್ರೀನಾಗ್, ನವುಲೆ ಮಂಜುನಾಥ್, ಈಶ್ವರಪ್ಪ ಇದ್ದರು.
ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ನೀಡಿದ ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಮಾಹಿತಿಯನ್ನು ವಿತ್ತಸಚಿವಾಲಯ ಫೆ.26ರಂದು ಬಿಡುಗಡೆ ಮಾಡಿದೆ. ಅದರ ಪ್ರಕಾರ ತೆರಿಗೆ ಹಂಚಿಕೆ ಅನುದಾನ 3.89 ಲಕ್ಷ ಕೋಟಿ, ಸಹಾಯ ಧನ ಅನುದಾನ 2.36 ಲಕ್ಷ ಕೋಟಿ, 2026-27ರಲ್ಲಿ ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನ 63,049 ಕೋಟಿ ರೂಪಾಯಿ, ಸಹಾಯಧನ ಅನುದಾನ 16,000 ಕೋಟಿ, ಕೇಂದ್ರದಿಂದ ರಾಜ್ಯಕ್ಕೆ 50ವರ್ಷಗಳವರೆಗೆ ಬಡ್ಡಿರಹಿತ ವಿಶೇಷ ನೆರವು, 15,945 ಕೋಟಿ ರೂ., ಮೆಟ್ರೋ ಯೋಜನೆಗೆ 15,611 ಕೋಟಿ, ಭಾರತ್ಮಾಲಾ ಹಂತ-1ರ ರಸ್ತೆ ಅಭಿವೃದ್ಧಿಗೆ 63,304 ಕೋಟಿ, ರಾಜ್ಯದ 7 ವಿಮಾನ ನಿಲ್ದಾಣಗಳಿಗೆ ಉಡಾನ್ ಯೋಜನೆಗೆ 7000 ಕೋಟಿ ಅಲ್ಲದೆ, ಇನ್ನೂ ಹತ್ತು-ಹಲವಾರು ಯೋಜನೆಗಳಿಗೆ ಕೇಂದ್ರದಿಂದ ರಾಜ್ಯಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಅನುದಾನ ಹರಿದು ಬಂದಿದೆ. ರಾಜ್ಯದ ಜನತೆಗೆ ಸಿಎಂ ಈ ಕುರಿತು ಪದೇ ಪದೇ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಈ ಅನುದಾನಗಳು ರಾಜ್ಯಕ್ಕೆ ಬಂದೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಲಿ ಎಂದು ಸವಾಲು ಎಸೆದರು.