ಶಿವಮೊಗ್ಗ, ಜು.21:
40% ವ್ಯವಹಾರದಲ್ಲಿ ಗುತ್ತಿಗೆದಾರನೋರ್ವನ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡು ಮಂತ್ರಿ ಪದವಿ ಕಳೆದುಕೊಂಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಪೊಲೀಸ್ ಇಲಾಖೆ ದೋಷ ಮುಕ್ತರನ್ನಾಗಿ ಮಾಡಿರುವುದು ಇಡೀ ಇಲಾಖೆ ಹಾಗೂ ಸರ್ಕಾರವನ್ನು ಜನ ನಂಬದಿರುವಂತೆ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದ್ದಾರೆ.
ಉಡುಪಿ ಪೊಲೀಸರು ಇಲ್ಲಿ ಕ್ಲೀನ್ ಚೀಟ್ ನೀಡಿ ಇಡೀ ಪ್ರಕರಣಕ್ಕೆ, ಗುತ್ತಿಗೆದಾರನ ಸಾವಿನ ನೋವಿಗೆ ತಿಲಾಂಜಲಿ ಇಟ್ಟಿದೆ. ಹಿಂದೆ ಇದೇ ಗುತ್ತಿಗೆದಾರ ಸಂತೋಷ್ ಬದುಕಿದ್ದಾಗಲೇ ಕನಿಷ್ಟ ಮೂರ್ನಾಕು ಬಾರೀ ಈಶ್ವರಪ್ಪ ವಿರುದ್ದ ಆರೋಪಿಸಿದ್ದು ಸುಳ್ಳಾ? ಸಾವು ಕಂಡ ನಂತರದ ವಿಷಯಕ್ಕೆ ಸಾಕ್ಷಿಗಳೇ ಸಿಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ತನ್ನ ಎಲ್ಲಾ ಇಲಾಖೆ ಹಾಗೂ ಅದರ ಅಧಿಕಾರಿಗಳನ್ನು ದುರ್ಭಳಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರಿಗೆ ಅವರೇ ಎನ್ ಓ ಸಿ ಪಡೆಯುವ ಸರ್ಕಾರವಾಗಿದೆ. ಪೊಲೀಸ್ ಇಲಾಖೆ ಮೇಲಿನ ಜನರ ಗೌರವಕ್ಕೆ ದಕ್ಕೆ ತಂದಿರುವ ಬಿಜೆಪಿಗೆ ಬರುವ ದಿನಗಳಲ್ಲಿ ಜನ ಸರಿಯಾದ ಪಾಠ ಕಲಿಸುತ್ತಾರೆ ಎಂದಿದ್ದಾರೆ.