ಬೆಂಗಳೂರು/ಶಿವಮೊಗ್ಗ,ಮಾ.12 : ವಿಧಾನಪರಿಷತ್ ಶೂನ್ಯವೇಳೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು, ಅನುದಾನ ಕೊರತೆಯಿಂದ ರಾಜ್ಯದ ಕೆಲವು ಕಡೆ ಪೊಲೀಸ್ ಸಿಬ್ಬಂದಿಗೆ ಸಂಬಳ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಅತ್ಯಂತ ದುಃಖಕರ ಮತ್ತು ಚಿಂತಾಜನಕ ಸಂಗತಿ ಎಂದು ಹೇಳಿದರು. ಹಗಲು ರಾತ್ರಿ ಭೇದವಿಲ್ಲದೆ ಜನರ ಭದ್ರತೆಗೆ ಶ್ರಮಿಸುವ ಪೊಲೀಸರೇ ಇಂದು ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ಸಂಕಷ್ಟ ಅನುಭವಿಸುವಂತಾಗಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಅವರು ಟೀಕಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ರಾಜ್ಯದ ಆಡಳಿತ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಸರ್ಕಾರ ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ, ಪೊಲೀಸರಿಗೆ ಸಂಬಳ ನೀಡುವುದಲ್ಲಿಯೂ ವಿಳಂಬವಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ತಕ್ಷಣವೇ ಪೊಲೀಸ್ ಇಲಾಖೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಬಾಕಿ ಉಳಿದಿರುವ ಸಂಬಳವನ್ನು ಶೀಘ್ರ ಪಾವತಿಸುವ ಕ್ರಮ ಕೈಗೊಳ್ಳಬೇಕು. ಜೊತೆಗೆ ಇಂತಹ ಪರಿಸ್ಥಿತಿ ಮರುಕಳಿಸದಂತೆ ಸಮರ್ಪಕ ಹಣಕಾಸು ವ್ಯವಸ್ಥೆ ರೂಪಿಸಲು ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರನ್ನು ಅವರು ಒತ್ತಾಯಿಸಿದರು.