ಶಿವಮೊಗ್ಗ : ಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಅವರು ಜಿಲ್ಲೆಯ ಅಭಿವೃದ್ಧಿಗೆ ಅನುದಾನ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ತೀವ್ರ ವಾಗ್ಧಾಳಿ ನಡೆಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಸ್ತುವಾರಿ ಸಚಿವರು ಜಿಲ್ಲೆಯ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದಾಗಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮೂರು ಬಜೆಟ್ ಮಂಡಿಸಿದರೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ಯಾವ ಅನುದಾನವೂ ಬಂದಿಲ್ಲ. ಬಜೆಟ್ನಲ್ಲಿ ೧೫ ಸಾವಿರ ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಕಟಿಸಿದರೂ ಜಿಲ್ಲೆಯಲ್ಲಿ ೧೯ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ ಎಂದು ಇಲಾಖಾ ಅಧಿಕಾರಿಗಳು ತಿಳಿಸುತ್ತಾರೆ. ಅದರಲ್ಲಿಯೂ ೧೯೬೪ರಲ್ಲಿ ಆರಂಭವಾದ ನಗರದ ಕಾಮಾಕ್ಷಿ ಬೀದಿಯಲ್ಲಿರುವ ಸರ್ಕಾರಿ ಶಾಲೆ ಯಾರಿಗೂ ಗೊತ್ತಾಗದ ಹಾಗೆ ಮುಚ್ಚಲ್ಪಟ್ಟು ಅಲ್ಲಿದ್ದ ವಿದ್ಯಾರ್ಥಿಗಳನ್ನು ಹೊಸಮನೆ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ. ಬಡವರ ಮಕ್ಕಳು ವಿದ್ಯೆ ಕಲಿಯಬಾರದು ಎನ್ನುವ ತೀರ್ಮಾನವನ್ನು ಸಚಿವರು ಮಾಡಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.

ಒಂದು ಕಡೆ ಶಿಕ್ಷಕರ ನೇಮಕಾತಿ, ಇನ್ನೊಂದೆಡೆ ಶಾಲೆ ಮುಚ್ಚುವ ಕೆಲಸ ನಡೆಯುತ್ತಿದೆ. ಸಚಿವರ ಈ ನಡೆ ಖಂಡನೀಯ. ಅವರಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದ ಅವರು, ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ತಡೆಗೆ ಪ್ರತ್ಯೇಕ ಪೊಲೀಸ್ ಪಡೆ ರಚಿಸಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರಿಗೆ ಸಲಹೆ ನೀಡಿದರು. ಶಿವಮೊಗ್ಗದಲ್ಲಿ ಒಳ್ಳೆಯ ಪೊಲೀಸ್ ಅಧಿಕಾರಿಗಳಿದ್ದಾರೆ. ಅವರಿಗೆ ಕೆಲಸ ಮಾಡಲು ಬಿಡಿ ಎಂದರು.
ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಮಾತನಾಡಿ, ಪಕ್ಷದ ಜಿಲ್ಲಾ ಘಟಕವನ್ನು ಪುನರ್ರಚಿಸಿದ್ದೇನೆ. ಬರುವ ಸೋಮವಾರದಿಂದ ಜಿಲ್ಲಾ ಪ್ರವಾಸ ಕೈಗೊಂಡು, ತಾಲ್ಲೂಕವಾರು ಪದಾಧಿಕಾರಿಗಳು, ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷ ಸಂಘಟಿಸುವ ಕಾರ್ಯ ನಡೆಯಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ನೂತನ ಕಾರ್ಯಾಧ್ಯಕ್ಷರಾಗಿ ದಾದಾಪೀರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್. ತ್ಯಾಗರಾಜ್, ಜಿಲ್ಲಾ ಖಜಾಂಚಿಯಾಗಿ ರಮೇಶ್ ಬಿ. ನಾಯಕ್ ಅವರನ್ನು ನೇಮಿಸಲಾಗಿದೆ. ವಿಧಾನಸಭಾ ಕ್ಷೇತ್ರದ ಶಿವಮೊಗ್ಗ ನಗರಾಧ್ಯಕ್ಷರಾಗಿ ದೀಪಕ್ಸಿಂಗ್ ಅವರನ್ನು ಪುನರ್ ನೇಮಕ ಮಾಡಲಾಗಿದೆ.
ಜಿಲ್ಲಾ ಯುವ ಜನತಾದಳಕ್ಕೆ ಭದ್ರಾವತಿಯ ಮಧುಕುಮಾರ್, ಮಹಿಳಾ ವಿಭಾಗಕ್ಕೆ ಗೀತಾ ಸತೀಶ್, ಎಸ್ಸಿ ಘಟಕಕ್ಕೆ ಡಿ. ಕಾಂತರಾಜ್ ಅಗಸವಳ್ಳಿ, ರೈತಮೋರ್ಚಾಕ್ಕೆ ದಾನೇಶಪ್ಪ ಆನವೇರಿ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗೀತಾ ಸತೀಶ್, ಹೆಚ್.ಎಂ. ಸಂಗಯ್ಯ, ನರಸಿಂಹ ಗಂಧದಮನೆ, ತ್ಯಾಗರಾಜ್, ಪುಷ್ಪಾ, ಉಷಾನಾಯಕ್, ಭವಾನಿ ನರಸಿಂಹ ಇನ್ನಿತರರು ಉಪಸ್ಥಿತರಿದ್ದರು.
ತವರಲ್ಲೇ ಸರ್ಕಾರಿ ಶಾಲೆ ಮುಚ್ಚಿಸಿದ ಶಿಕ್ಷಣ ಸಚಿವರು!
ಸರ್ಕಾರಿ ಶಾಲೆ ವಿಷಯದಲ್ಲಿ ಯಾವುದೇ ಮುಲಾಜಿಲ್ಲ ಅವುಗಳನ್ನು ಉಳಿಸುತ್ತೇನೆ. ಹಾಗೆ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾಗಿ ಇರುವ ಕೆಲವೇ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ 20ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಿದ್ದಾರೆ. ಇಡೀ ರಾಜ್ಯದಲ್ಲಿ ಅದರ ಪ್ರಮಾಣ ಅವಲೋಕಿಸಿದಾಗ ಭಯವಾಗುತ್ತದೆ.
ಹಾಗಾಗಿ ಮಾತು ಕೊಟ್ಟಂತೆ ನಡೆದುಕೊಳ್ಳಲು ನಮ್ಮ ಕೋರಿಕೆ
- ಕೆ.ಬಿ. ಪ್ರಸನ್ನ ಕುಮಾರ್ ಮಾಜಿ ಶಾಸಕರು ಹಾಗೂ ಜಾತ್ಯತೀತ ಜನತಾದಳದ ರಾಜ್ಯ ನಾಯಕರು
ಮಾ.೧೪ರಂದು ಬೆಳಿಗ್ಗೆ ೧೧ಗಂಟೆಗೆ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ನೂತನ ಜಿಲ್ಲಾಧ್ಯಕ್ಷೆ ಗೀತಾ ಸತೀಶ್ ತಿಳಿಸಿದ್ದಾರೆ. ಸಮಾರಂಭವನ್ನು ಶಾಸಕಿ ಶಾರದಾ ಪೂರ್ಯಾನಾಯ್ಕ್ ಉದ್ಘಾಟಿಸಲಿದ್ದು, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ರಾಮೇಗೌಡ ಹಾಗೂ ಪಕ್ಷದ ಮುಖಂಡರು ಆಗಮಿಸುವರು. ಹೊಸನಗರದ ಮೇದಿನಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುವುದು ಎಂದರು.