ಶಿವಮೊಗ್ಗ : ಕಂದಾಯ ಸಚಿವ ಆರ್.ಅಶೋಕ್ ಸೊಪ್ಪಿನ ಬೆಟ್ಟ ಹಾಗೂ ಕಾನು ಅನಧಿಕೃತ ಸಾಗುವಳಿ ಹಕ್ಕು ಮಂಜೂರಾತಿಗೆ ಅವಕಾಶವಿಲ್ಲ ಎಂದು ಅಧಿವೇಶನದಲ್ಲಿ ನೀಡಿದ ಹೇಳಿಕೆಯನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ತೀವ್ರವಾಗಿ ಖಂಡಿಸಿದೆ.
ಕಂದಾಯ ಸಚಿವರು ಶಿವಮೊಗ್ಗ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದ ವಿಶೇಷ ಹಕ್ಕುಳ್ಳ ಭೂಮಿಗಳಾದ ಸೊಪ್ಪಿನ ಬೆಟ್ಟ, ಕಾನು, ಕುಮ್ಕಿ ಬೆಟ್ಟ ಭೂಮಿ, ಜಮ್ಮಾ ಬಾಣೆ ಭೂಮಿ ಹಾಗೂ ಮೋಟಸ್ಥಲ್ ತಳಿ ಭೂಮಿಗಳ ಅನಧಿಕೃತ ಸಾಗುವಳಿ ಸಕ್ರಮೀಕರಣಕ್ಕೆ ಹಾಗೂ ಮಂಜೂರಾತಿಗೆ ಅವಕಾಶವಿಲ್ಲವೆಂದು ನೀಡಿರುವ ಹೇಳಿಕೆಯಿಂದ ಸಾವಿರಾರು ಬಗರ್ ಹುಕುಂ ಸಾಗುವಳಿದಾರರು ತಮ್ಮ ಬದುಕಿಗಾಗಿ ಮಾಡಿಕೊಂಡಿರುವ ಸಾಗುವಳಿ ಭೂಮಿ ಹಾಗೂ ವಸತಿ ಹಕ್ಕನ್ನು ಕಳೆದುಕೊಂಡು ಜೈಲು ಶಿಕ್ಷೆ ಅನುಭವಿಸುವುದಲ್ಲದೇ ಹಾಗೂ ಭೂಮಿ ಕಳೆದುಕೊಂಡು ನಿರ್ಗತಿಕರಾಗಲಿದ್ದಾರೆ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ.ಎ. ರಮೇಶ್ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
ವಿಶೇಷ ಹಕ್ಕುಳ್ಳ ಭೂಮಿಗಳ ಬಗರ್ ಹುಕುಂ ಸಾಗುವಳಿದಾರರ ಸಾಗುವಳಿ ಹಾಗೂ ವಸತಿ ಹಕ್ಕನ್ನು ರಕ್ಷಿಸಲು ನಿರಾಕರಿಸಿರುವ ರಾಜ್ಯ ಸರ್ಕಾರದ ಧೋರಣೆ ಯನ್ನು ಖಂಡಿಸಿದ ಅವರು, ಸರ್ಕಾರದ ಧೋರಣೆಯಿಂದ ಶ್ರೀಮಂತರಿಗೆ ಹಾಗೂ ರಿಯಲ್ ಎಸ್ಟೇಟ್ನವರಿಗೆ ಅನುಕೂಲ ಕಲ್ಪಿಸಿದಂತಾಗಿದೆ ಹೊರತು ಬಡವರ ಪರವಾಗಿಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ೨೦೧೦ ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಹಕ್ಕುಳ್ಳ ಭೂಮಿಗಳನ್ನು ಅರಣ್ಯ ಭೂಮಿಗಳೆಂದು ಹಾಗೂ ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಮೇಲ್ಕಂಡ ಭೂಮಿಗಳನ್ನು ಮಂಜೂರಾತಿ ಮಾಡಲು ಸಾಧ್ಯವಿಲ್ಲ ವೆಂದು ಸುತ್ತೋಲೆ ಹೊರಡಿಸಿದ ಕಾರಣ ಅನಧಿಕೃತ ಸಾಗುವಳಿ ಸಕ್ರಮಿಕರಣ ಹಾಗೂ ವಸತಿ ಹಕ್ಕು ಅವಕಾಶವಿಲ್ಲದಂತಾಗಿದೆ. ಕಂದಾಯ ಸಚಿವರ ಹೇಳಿಕೆ ಬಿಜೆಪಿ ಸರ್ಕಾರದ ಭೂ ಹಕ್ಕಿನ ವಿರೋಧಿ ಧೋರಣೆ ಯನ್ನು ಎತ್ತಿ ತೋರಿಸುತ್ತದೆ ಎಂದರು.
ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ಸು ಪಡೆದು ಈಗಾಗಲೇ ಅನಧಿಕೃತ ಸಾಗುವಳಿ ಮತ್ತು ವಸತಿ ಕಲ್ಪಿಸಿಕೊಂಡಿರುವ ಮತ್ತು ಸಕ್ರಮಿಕರ ಣಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರ ರಕ್ಷಣೆಗಾಗಿ ಕೂಡಲೇ ಅಗತ್ಯ ಕಾನೂನು ಕ್ರಮಕೈಗೊಂಡು ಭೂ ಮಂಜೂ ರಾತಿಗೆ ಅವಕಾಶ ಕಲ್ಪಿಸಬೇಕು. ಇನ್ನು ೧೫ ದಿನದೊಳ ಗಾಗಿ ಅವಕಾಶ ಕಲ್ಪಿಸದಿದ್ದಲ್ಲಿ ಮಲೆನಾಡು ಭಾಗದ ಕೆಲವು ತಾಲೂಕುಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಸಿ.ನಿರಂಜನ್, ಹೊಳೆಮಡಿಲು ವೆಂಕಟೇಶ್, ಆದಿಮೂರ್ತಿ ಇನ್ನಿತರರು ಇದ್ದರು.