ಶಿವಮೊಗ್ಗ: ಏಕಾ ಏಕಿ 6 ಮನೆಗಳು ಒಂದೇ ಭಾರಿ ಕುಸಿದು ಬಿದ್ದ ದುರ್ಘಟನೆ ಇಂದು ಬೆಳಗ್ಗೆ 10.30 ರಹೊತ್ತಿಗೆ ಶಿವಮೊಗ್ಗ ಸವಾರ್‌ಲೈನ್ ರಸ್ತೆಯಲ್ಲಿ ನಡೆದಿದೆ.
ಹೂ ಮಾರಾಟ ಮಾಡುವ ಕಾಯಕದಲ್ಲಿದ್ದ ರಾಧ, ಭಾಗ್ಯಮ್ಮ, ಭಾಗ್ಯಲಕ್ಷ್ಮೀ, ನಾಗಮ್ಮ, ರಂಗಮ್ಮ, ಗಾಯತ್ರಮ್ಮ ಎಂಬುವವರ ಮನೆಗಳು ಕುಸಿದು ಬಿದ್ದಿದ್ದು, ಆಗ ಉಂಟಾದ ಶಬ್ದಕ್ಕೆ ಮನೆಯಲ್ಲಿದ್ದ ಮಕ್ಕಳು ಅದೃಷ್ಟಾವಶಾತ್ ಹೊರಗೆ ಬಂದಿದ್ದರಿಂದ ಭಾರಿ ಅವಘಡ ತಪ್ಪಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಳೆಯ ಹೊಡೆತಕ್ಕೆ ಮನೆಗಳು ಕುಸಿದು ಬಿದಿದ್ದು, ಘಟನೆ ತಿಳಿದ ತಕ್ಷಣ ಸ್ಥಳೀಯ ನಗರಪಾಲಿಕೆ ಸದಸ್ಯೆ ಮೀನಾ ಗೋವಿಂದರಾಜು ಹಾಗೂ ಬಿಜೆಪಿ ಮುಖಂಡ ಕಿರಣ್ ಎಸ್.ಜಿ ಅವರು ಭೇಟಿ ನೀಡಿದ್ದರು.
ಆ ತಕ್ಷಣ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್‌ಗನ್ನಿ, ಅಧಿಕಾರಿಗಳು ಹಾಗೂ ಇತರ ಜನಪ್ರತಿನಿಧಿಗಳು ಭೇಟಿ ನೀಡಿ ಮನೆಗಳ ಮಾಲೀಕರಿಗೆ ಸಾಂತ್ವಾನ ಹೇಳಿದರು. ಹಾಗೂ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವುದಾಗಿ ಮೇಯರ್ ಭರವಸೆ ನೀಡಿದರು.
ಕಿರಣ್ ವ್ಯವಸ್ಥೆಗೆ ಶ್ಲಾಘನೆ: ಮೊನ್ನೆ ಇದೇ ರಸ್ತೆಯಲ್ಲಿ 2 ಮನೆಗಳು ಕುಸಿದು ಬಿದಿದ್ದು, ಇಂದು 6 ಮನೆಗಳು ಕುಸಿದಿವೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯೆಯ ಪುತ್ರ ಹಾಗೂ ಬಿಜೆಪಿ ಮುಖಂಡ ಎಸ್.ಜಿ.ಕಿರಣ್ ಮನೆ ಕಳೆದುಕೊಂಡವರಿಗೆ ಸೂಕ್ತ ಆಹಾರ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ.