ಶಿವಮೊಗ್ಗ,ಆ.18:ದೇಶ ಇನ್ನಷ್ಟು ಪ್ರಗತಿ ಸಾಧಿಸಲಿದೆ, ಸ್ವಾತಂತ್ರ್ಯೋತ್ಸವದಲ್ಲಿ ಕೃಷ್ಣಮೂರ್ತಿ ಅಭಿಮತ. ಭಾರತಕ್ಕೆ ತಗುಲಿದ್ದ ಬಡತನ ಹಾಗೂ ಮೂಡನಂಬಿಕೆಗಳು ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಅತಿ ಕಡಿಮೆಯಾಗುತ್ತಿರುವುದು ಸಂತೋಷದ ಸಂಗತಿ. ಸಾರ್ಥಕವೆನಿಸುವ

ಸಾಧನೆಗೈದ ಭಾರತ ಇನ್ನಷ್ಟು ಆಳದಲ್ಲಿ ಅಡಗಿರುವ ಬಡತನ, ಹಸಿವು ಇಂಗಿಸುವ ಜೊತೆಗೆ ಇನ್ನಷ್ಟು ವೈಜ್ಞಾನಿಕವಾದ ಅಭಿವೃದ್ಧಿ ಸಾಧಿಸುತ್ತದೆ ಎಂದು ಬಿಎಸ್ಎಫ್ ಮುಖ್ಯ ಪೇದೆ ಕೃಷ್ಣಮೂರ್ತಿ ಸಿ. ಅವರು ತಿಳಿಸಿದರು.

ಅವರು ಗುರುಪುರದ ಬಿಜಿಎಸ್ ಶಾಲಾ- ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ,ದೇಶ ಈಗ ಹೊಂದುತ್ತಿರುವ ಅಭಿವೃದ್ಧಿಯ ಹೆಜ್ಜೆಗಳು ಸದ್ಯದಲ್ಲೇ ಇನ್ನಷ್ಟು ಒಳ್ಳೆಯ ನಿರೀಕ್ಷಿತ ಫಲ ನೀಡುತ್ತವೆ ಎಂದು ಹೇಳಿದರು.

1947ರ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಐತಿಹಾಸಿಕ ನೆನಪುಗಳನ್ನು ತಿರುವಿ ನೋಡಿದಾಗ ನಾವೀಗ ಸಬಲರು ಹಾಗೂ ಸುಜ್ಞಾನಿಗಳು ಆಗುವಂತಹ ದಿಟ್ಟ ಹೆಜ್ಜೆಯನ್ನು ಇಡುತ್ತಿದ್ದೇವೆ. ಅಂತಹ ಹೆಜ್ಜೆಗೆ ಇಂದಿನ ಮಕ್ಕಳೇ ಮೂಲ ಸ್ಪೂರ್ತಿ. ಹಾಗಾಗಿ ನೀವುಗಳು ದೇಶ ಪ್ರೇಮದ ಜೊತೆಗೆ,ದೇಶಕ್ಕಾಗಿ ಹೋರಾಡಿದ ಹಿರಿಯರ ಬಲಿದಾನ, ತ್ಯಾಗ ಅವರ ಶೌರ್ಯವನ್ನು ನೆನಪಿಸಿಕೊಂಡು, ದೇಶದ ಅಭಿವೃದ್ಧಿಗೆ ಕೈಜೋಡಿಸುವಂತೆ ಮಕ್ಕಳಿಗೆ ಕರೆ ನೀಡಿದರು.

ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಮಾತನಾಡುತ್ತಾ ದೇಶ ಅಭಿವೃದ್ಧಿ ಹೊಂದಲು ನೀವುಗಳು ಈ ಕ್ಷಣದಿಂದಲೇ ಬದಲಾವಣೆ ತಂದುಕೊಳ್ಳುವ ಅಗತ್ಯವಿದೆ.ಓದಿನ ವಿಷಯಗಳ ಬಗ್ಗೆ ಶ್ರದ್ದೆ, ಹಾಗೂ ಸಮಯಪ್ರಜ್ಞೆ ಹೊಂದಬೇಕಿದೆ. ವಿಶೇಷವಾಗಿ ಎಲ್ಲರೂ ದೇಶದ ಬಗ್ಗೆ ಅಭಿಮಾನವನ್ನು ಹೊಂದುವಂತರಾಗ ಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರು ಇನ್ನು ಮುಂತಾದವರು ಉಪಸ್ಥಿತರಿದ್ದರು. ಶಾಲಾ ಕಾಲೇಜಿನ ಮಕ್ಕಳು ಸ್ವಾತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿದರು ಮತ್ತು ದೇಶಭಕ್ತಿ ಗೀತೆಯನ್ನು ಹಾಡಿದರು.