ಶಿವಮೊಗ್ಗ: ಬಿಸಿಯೂಟ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಅಡುಗೆ ಸಿಬ್ಬಂದಿ ಸಂಘದ ನೇತೃತ್ವದಲ್ಲಿ ನೂರಾರು ಅಡುಗೆ ಸಿಬ್ಬಂದಿ ಮಹಾವೀರ ವೃತ್ತದಿಂದ ಜಿಲ್ಲಾ ಪಂಚಾಯತ್ ಕಚೇರಿವರೆಗೆ ಮೆರವಣಿಗೆ ನಡೆಸಿ, ಘೋ?ಣೆಗಳನ್ನು ಕೂಗುತ್ತಾ ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಹನುಮಕ್ಕ, ಬಿಸಿಯೂಟ ತಯಾರಿ, ವಿತರಣೆ ಸೇರಿದಂತೆ ಎಲ್ಲಾ ಕೆಲಸಗಳನ್ನು ಅಡುಗೆ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ. ಆದರೂ ಅವರಿಗೆ ಸೂಕ್ತ ವೇತನ, ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಅಧಿಕೃತವಾಗಿ ಅಡುಗೆ ಸಿಬ್ಬಂದಿಗೆ ವಹಿಸಿ, ಅವರಿಗೆ ಗೌರವಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಶಾಲೆಗಳಲ್ಲಿ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೊಳಿಸುವ ಪ್ರಸ್ತಾಪವನ್ನು ಕೈಬಿಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು. ಈ ವ್ಯವಸ್ಥೆ ಜಾರಿಯಾದರೆ ಅಡುಗೆ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಜೊತೆಗೆ ಬಿಸಿಯೂಟದ ಆಡಳಿತಾತ್ಮಕ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸಬಾರದು, ಶಿಕ್ಷಕರು ಬೋಧನಾ ಕಾರ್ಯದತ್ತಲೇ ಗಮನ ಹರಿಸಬೇಕು ಎಂದೂ ಅವರು ಒತ್ತಾಯಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಮತ್ತು ನಡಾವಳಿಯಂತೆ ಮುಖ್ಯ ಅಡುಗೆಯವರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಜಂಟಿ ಖಾತೆಯ ಮೂಲಕ ಯೋಜನೆ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು

ಆಗ್ರಹಿಸಿದರು. ಮುಖ್ಯೋಪಾಧ್ಯಾಯರು ಜವಾಬ್ದಾರಿ ನಿರ್ವಹಿಸಲು ಸಾಧ್ಯವಿಲ್ಲ ಎಂದರೆ ಮುಖ್ಯ ಅಡುಗೆಯವರು ಮತ್ತು ಎಸ್ಡಿಎಂಸಿ ಅಧ್ಯಕ್ಷರ ಜಂಟಿ ಖಾತೆ ತೆರೆಯಲು ಅವಕಾಶ ನೀಡಬೇಕು ಎಂದು ಅವರು ಹೇಳಿದರು. ಅಡುಗೆ ಸಿಬ್ಬಂದಿಯಲ್ಲಿಯೇ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವೀಧರರಿದ್ದು, ಯೋಜನೆ ನಿರ್ವಹಿಸುವ ಅರ್ಹತೆ ಮತ್ತು ಅನುಭವವನ್ನು ಅವರು ಹೊಂದಿದ್ದಾರೆ ಎಂದು ಮುಖಂಡರು ಸ್ಪ?ಪಡಿಸಿದರು.
ನಂತರ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.