ಸಾಗರ : ಎಲ್ಲವೂ ಸರಿ ಇದ್ದಿದ್ದರೆ ನಾನು ಶಿವಮೊಗ್ಗದ ನೆಹರೂ ಮೈದಾನದಲ್ಲಿ ಧ್ವಜಾರೋಹಣ ಮಾಡಬೇಕಾಗಿತ್ತು. ನನಗೆ ಅದೃಷ್ಟ ಇಲ್ಲ. ತಾಲ್ಲೂಕಿನ ಜನರು ನನಗೆ ಹೆಚ್ಚು ಮತ ನೀಡಿ ಗೆಲ್ಲಿಸಿದ್ದರೂ, ಮಂತ್ರಿಯಾಗಿ ಹೆಚ್ಚು ಅಭಿವೃದ್ದಿ ಮಾಡುವ ಅದೃಷ್ಟ ಕ್ಷೇತ್ರಕ್ಕೆ ಸಿಗಲಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತೊಮ್ಮೆ ತಮ್ಮ ನೋವು ಹೊರಗೆ ಹಾಕಿದ್ದಾರೆ.

ಇಲ್ಲಿನ ನೆಹರೂ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಧ್ವಜಾರೋಹಣ ಮಾಡುವ ಅವಕಾಶ ತಪ್ಪಿದರೂ, ಸಾಗರದ ಜನರ ನಡುವೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಸಂತೋಷ ತಂದಿದೆ ಎಂದರು.

ಪ್ರತಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರೇ ಧ್ವಜಾರೋಹಣ ನೆರವೇರಿಸಬೇಕು ಎನ್ನುವ ಚರ್ಚೆ ನಡೆಯುತ್ತಿದ್ದು ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಾಧ್ಯವಾದರೆ ಸದನದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಹಿಂದೆ ಆಗಿರುವ ತಿದ್ದುಪಡಿಯಿಂದಾಗಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಧ್ವಜಾರೋಹಣ ನೆರವೇರಿಸುತ್ತಿದ್ದಾರೆ. ಮುಂದೆ ನೋಡೋಣ ಎಂದು ತಿಳಿಸಿದರು.

ಸಚಿವ ಜಮೀರ್ ಅಹ್ಮದ್ ವಿಜಯನಗರದಲ್ಲಿ ಧ್ವಜಾರೋಹಣ ನೆರವೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಮಾತ್ರಕ್ಕೆ ಅವರನ್ನು ದೇಶದ್ರೋಹಿ ಎಂಬರ್ಥದಲ್ಲಿ ಬಿಜೆಪಿಯವರು ವರ್ತಿಸುತ್ತಿರುವುದು ಸರಿಯಲ್ಲ. ಜಮೀರ್ ಅಹ್ಮದ್ ಅವರ ಕನ್ನಡ ಉಚ್ಚಾರ ಸರಿಯಾಗಿಲ್ಲ. ತಮ್ಮ ಭಾಷಣ ಸಂದರ್ಭದಲ್ಲಿ ಕನ್ನಡ ಭಾಷೆ, ಸ್ವಾತಂತ್ರ್ಯ ದಿನದ ಸಂದೇಶ ನೀಡುವಾಗ ತಪ್ಪು ಆಗಬಾರದು ಎಂದು ಅವರು ಧ್ವಜಾರೋಹಣದಿಂದ ವಿನಾಯಿತಿ ಕೋರಿದ್ದಾರೆ. ಜಮೀರ್ ಅಹ್ಮದ್ ನನಗೆ ಉಸ್ತುವಾರ ಸಚಿವ ಸ್ಥಾನ ಬೇಡ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ಬೇರೆ ಯಾರಿಗಾದರೂ ಕೊಡಬಹುದಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿಯವರು ಮಹಾರಾಷ್ಟ್ರದಲ್ಲಿ ಅವರದ್ದೆ ಸರ್ಕಾರ ಇದೆ. ಅಲ್ಲಿ ಪಾನ್ ಮಸಾಲಾ ನಿಷೇಧ ಮಾಡಿರುವುದು, ನೂರಾರು ಅಡಿಕೆ ಕಂಟೈನರ್ಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಹಾಲಪ್ಪ, ಜ್ಞಾನೇಂದ್ರ ಗುಟ್ಕಾ, ಪಾನ್ ಮಸಾಲಾ ಬಗ್ಗೆ ಮಾತನಾಡುವಾಗ ಮಹಾರಾಷ್ಟ್ರದಲ್ಲಿ ನಿಷೇದಿಸಿರುವುದನ್ನು ಏಕೆ ಪ್ರಸ್ತಾಪ ಮಾಡುತ್ತಿಲ್ಲ. ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ನಿಷೇಧ ಮಾಡಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ನಾನು ಮತ್ತು ೯ ಜಿಲ್ಲೆಗಳ ಶಾಸಕರು

ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇವೆ. ಅಂತಹ ವಾತಾವರಣ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಮಲೆನಾಡು ಭಾಗದ ಮುಳುಗಡೆ ಸಂತ್ರಸ್ತ ಬದುಕಿಗೆ ವಿಷ ಹಾಕಿದವರು ಅಡಿಕೆ ಬೆಳೆಗಾರರ ಪರವಾಗಿ ಮಾತನಾಡುವುದು ಬೇಡ. ಒಂದೊಮ್ಮೆ ಸುಪ್ರೀಂ ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಸಂತ್ರಸ್ತರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲಸೆ ಚಂದ್ರಪ್ಪ, ಸೈಯದ್ ಜಾಕೀರ್, ಅನ್ವರ್ ಭಾಷಾ, ವಿಲ್ಸನ್ ಗೋನ್ಸಾಲ್ವಿಸ್, ನಿತ್ಯಾನಂದ ಶೆಟ್ಟಿ, ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು