ಆನಂದಪುರ : ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ರಸ್ತೆ ಬದಿಯಲ್ಲಿ ನಿಂತಿದ್ದ 8 ವರ್ಷದ ಬಾಲಕನಿಗೆ ಲಗೇಜ್ ಆಟೋ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ಸೆ.27ರಂದು ಸಂಜೆ ಗೌತಮಪುರ ಕಡೆಯಿಂದ ಆನಂದಪುರದತ್ತ ಟಾಟಾ ಲಗೇಜ್ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗೇರ್ಬೀಸ್ ಸಮೀಪದ ತೋಳಿಕಲ್ಲಿನ ಸಂತೋಷ್ ಕೊಲ್ಲಪ್ಪ ಎಂಬವರು ಆಟೋ ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆನಂದಪುರ–ಶಿಕಾರಿಪುರ ರಸ್ತೆಯ ದಾಸಕೊಪ್ಪ ಗ್ರಾಮದ ಅಂಗಡಿ ಬಳಿ ನಿಂತಿದ್ದ ತನ್ಮಯ್ (8), ತಂದೆ ಪ್ರಶಾಂತ್ ಕೃಷ್ಣಮೂರ್ತಿ ಎಂಬ ಬಾಲಕನಿಗೆ ಆಟೋದ ಗ್ರಿಲ್ ತಾಗಿ ಗಂಭೀರ ಗಾಯಗಳಾಗಿದ್ದವು.

ಅಪಘಾತದಲ್ಲಿ ಬಾಲಕನ ಬಲ ಹಣೆ ಹಾಗೂ ಬಲಕೈಗೆ ಗಂಭೀರ ಗಾಯಗಳಾಗಿದ್ದು, ಹಣೆ ಭಾಗದಲ್ಲಿ ತೆರೆದ ಗಾಯವಾಗಿ ರಕ್ತಸ್ರಾವವಾಗಿತ್ತು. ತಕ್ಷಣ ಬಾಲಕನನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಬಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.