ಶಿವಮೊಗ್ಗ: ₹5 ಲಕ್ಷ ನಗದು ಹಾಗೂ ಚಿನ್ನ ತರುವಂತೆ ಒತ್ತಾಯಿಸಿ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಪತಿ ಸೇರಿದಂತೆ ಐವರ ವಿರುದ್ಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆ ಹಟ್ಟಿ ಗ್ರಾಮದ ಹೆಚ್.ಎಂ. ನಾಗರತ್ನ (36) ನೀಡಿದ ದೂರಿನ ಮೇರೆಗೆ ಹೊಳಲೂರು ಗ್ರಾಮದ ನಾಗರಾಜ, ಶಾಂತಮ್ಮ ಹಾಗೂ ಮಡಿಕೆ ಚೀಲೂರು ಗ್ರಾಮದ ಲೀಲಾವತಿ, ಮಂಜುನಾಥ ಮತ್ತು ಕುಬೇರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

ನಾಗರಾಜ ಅವರೊಂದಿಗೆ 2012ರ ಫೆ.2ರಂದು ಶಿವಮೊಗ್ಗದ ವೀರಶೈವ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿತ್ತು. ಮದುವೆ ಸಂದರ್ಭದಲ್ಲಿ ತವರು ಮನೆಯವರು ₹1.20 ಲಕ್ಷ ನಗದು, 20 ಗ್ರಾಂ ಚಿನ್ನದ ಬ್ರಾಸ್ಲೆಟ್, 12 ಗ್ರಾಂ ಉಂಗುರ, 16 ಗ್ರಾಂ ಚಿನ್ನದ ಸರ ಹಾಗೂ ಬಟ್ಟೆಬರೆ ಸೇರಿದಂತೆ ₹15 ಲಕ್ಷ ಖರ್ಚು ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿವಾಹವಾದ ಮೂರು ತಿಂಗಳ ಬಳಿಕ ಪತಿ ಹಾಗೂ ಕುಟುಂಬದವರು ಸಣ್ಣಪುಟ್ಟ ವಿಚಾರಗಳಿಗೆ ಬೈದು, ಹಲ್ಲೆ ಮಾಡುತ್ತಿದ್ದರು. ತವರು ಮನೆಯಿಂದ ₹5 ಲಕ್ಷ ನಗದು ಹಾಗೂ 10 ತೊಲ ಚಿನ್ನ ತರುವಂತೆ ಒತ್ತಾಯಿಸಿ, ಇಲ್ಲದಿದ್ದರೆ ವಿಚ್ಛೇದನ ನೀಡುವುದಾಗಿ ಬೆದರಿಸಿ ಕಿರುಕುಳ ನೀಡುತ್ತಿದ್ದರು ಎಂದು ನಾಗರತ್ನ ಆರೋಪಿಸಿದ್ದಾರೆ.

2014ರಲ್ಲಿ ಹೆಣ್ಣು ಮಗು ಜನಿಸಿದ ಬಳಿಕವೂ ವಿವಿಧ ರೀತಿಯಲ್ಲಿ ಕಿರುಕುಳ ನೀಡಿದ್ದರು. ಬಳಿಕ ₹5 ಲಕ್ಷ ಹಾಗೂ 5 ತೊಲ ಚಿನ್ನ ತರುವಂತೆ ಒತ್ತಾಯಿಸಿ ಮನೆಯಿಂದ ಹೊರಹಾಕಿದ್ದರು. ಈ ಕುರಿತು ಪೋಷಕರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿದರೂ ಪ್ರಯೋಜನವಾಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪತಿ 2016ರಲ್ಲಿ ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ನಾಗರತ್ನ ಅವರ ಪರವಾಗಿ ಆದೇಶವಾಗಿದ್ದು, ಬಳಿಕ ಹೈಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆಯಲ್ಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಮಾರು 15 ದಿನಗಳ ಹಿಂದೆ ಪಂಚಾಯಿತಿಗಾಗಿ ಆರೋಪಿಗಳ ಮನೆಗೆ ತೆರಳಿದ್ದಾಗ, ವರದಕ್ಷಿಣೆ ಹಾಗೂ ಹಣ ನೀಡಿದರೆ ಮಾತ್ರ ಮನೆಗೆ ಬರುವಂತೆ ಹೇಳಿ, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಪತಿ ಬೆದರಿಕೆ ಹಾಕಿದ್ದಾರೆ ಎಂದು ನಾಗರತ್ನ ಆರೋಪಿಸಿದ್ದಾರೆ. ಹಲವು ಬಾರಿ ದೂರವಾಣಿ ಮೂಲಕ ಮಾತನಾಡಲು ಪ್ರಯತ್ನಿಸಿದಾಗಲೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.