ಶಿವಮೊಗ್ಗ,ಆ.18: ‘ಅಧ್ಯಾತ್ಮವೇ ಭಾರತದ ಶಕ್ತಿ. ಅಧ್ಯಾತ್ಮದ ಶಕ್ತಿಯ ಮೂಲಕವೇ ಭಾರತವು ವಿಶ್ವಗುರು ಆಗಲು ಸಾಧ್ಯ. ಮೊದಲು ನಾವು ನಮ್ಮ ಅಧ್ಯಾತ್ಮದ ಆಂತರ್ಯ ಅರಿತುಕೊಳ್ಳಬೇಕಿದೆ’ ಎಂದು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ನಗರದಲ್ಲಿ ನಿನ್ನೆ ಸಂಜೆ ನಡೆದ “ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇವತ್ತು ಟರ್ಕಿ, ಇರಾನ್, ಅಮೆರಿಕ, ಚೀನಾ, ಜಪಾನ್ನಂಥ ದೇಶಗಳಲ್ಲಿಯೂ ಭಾರತದ ಅಧ್ಯಾತ್ಮದ ಬಗ್ಗೆ ಕುತೂಹಲವಿದೆ ಎಂದು ವಿವರಿಸಿದರು.

ಭಾರತೀಯರ ‘ವಸುಧೈವ ಕುಟುಂಬಕಂ’ ಪರಿಕಲ್ಪನೆಯಲ್ಲಿ ಪಂಚಭೂತಗಳಾದ ಭೂಮಿ, ನೀರು, ಗಾಳಿ, ಆಕಾಶ ಮತ್ತು ಮಣ್ಣು ಸಹ ನಮ್ಮ ಕುಟುಂಬದ ಭಾಗವೇ ಆಗುತ್ತವೆ. ವನ್ಯಜೀವಿಗಳೂ ಇದಕ್ಕೆ ಹೊರತಾಗಿಲ್ಲ. ವಕೀಲರ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯದಲ್ಲಿ 5 ಕೋಟಿ ಸಸ್ಯಗಳನ್ನು ನೆಡುವ ಸಂಕಲ್ಪ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಒಬ್ಬ ವ್ಯಕ್ತಿಯ ಯಶಸ್ಸನ್ನು ಅಳೆಯಲು ಹಣವನ್ನೇ ಮಾನದಂಡವಾಗಿ ಬಳಸುತ್ತಿರುವುದು ಹಲವು ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. “ಸಕ್ಸಸ್ ಈಕ್ವಲ್ಸ್ ಟು ಮನಿ” ಎನ್ನುವ ಸೂತ್ರವೇ ತಪ್ಪು. ನಿಸ್ವಾರ್ಥ ಸೇವಾ ಮನೋಭಾವ ಬೆಳೆಸದ ಶಿಕ್ಷಣಕ್ಕೆ ಯಾವುದೇ ಅರ್ಥವಿಲ್ಲ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಮಕ್ಕಳು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ನೋಡಿದಾಗ ನನ್ನ ಮನಸ್ಸು ಕಲಕುತ್ತದೆ. ಅಮೆರಿಕದಂಥ ದೇಶದಲ್ಲಿ ಆಸ್ಪತ್ರೆಗಳ ತುರ್ತುನಿಗಾ ಘಟಕಗಳಲ್ಲಿ ಮಕ್ಕಳೇ ತುಂಬಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಶಿಕ್ಷಣ ಕೊಡದೆ ಈ ಪರಿಸ್ಥಿತಿ ಬದಲಾಗುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.

ದೊಡ್ಡವರಾದ ಮೇಲೆ ಏನಾಗಬೇಕು ಎನ್ನುವುದನ್ನು ಮಕ್ಕಳು ನಿರ್ಧರಿಸಬೇಕು. ಎಲ್ಲ ಮಕ್ಕಳಿಗೂ ಒಂದಲ್ಲ ಒಂದು ಪ್ರತಿಭೆ ಕೊಟ್ಟೇ ದೇವರು ಭೂಮಿಗೆ ಕಳಿಸಿರುತ್ತಾನೆ. ಅದನ್ನು ಅವರು ಕಂಡುಕೊಳ್ಳಲು, ಅದೇ ಪ್ರತಿಭೆಯ ಮೂಲಕ ಅವರ ಬೆಳಗಲು ಸಮಾಜ ಅವಕಾಶ ಮಾಡಿಕೊಡಬೇಕು. ಎಲ್ಲರೂ ವೈದ್ಯರೇ ಆಗಬೇಕು ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕಮರೂರಿನ ಶ್ರೀ ಸತ್ಯ ಸಾಯಿ ಸರ್ವನಿಕೇತನಂ ಗುರುಕುಲದ ಪ್ರಧಾನ ಪಾಲಕರಾದ ಶಿವಪ್ರಸಾದ್ ಭಟ್, “ಪ್ರಪಂಚದ ಬಹುತೇಕ ಸಮಸ್ಯೆಗಳಿಗೆ ‘ಒಂದು ಜಗತ್ತು ಒಂದು ಕುಟುಂಬ’ ಪರಿಕಲ್ಪನೆಯು ಪರಿಹಾರವಾಗಬಲ್ಲದು” ಎಂದು ಅಭಿಪ್ರಾಯಪಟ್ಟರು.

ಸದ್ಗುರು ಶ್ರೀ ಮಧುಸೂದನ ಸಾಯಿಯವರು ಸಂಪೂರ್ಣ ಉಚಿತ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ನೀಡುವ ಮೂಲಕ ನಾವೆಲ್ಲರೂ ಒಂದೇ ಕುಟುಂಬದವರು ಎಂಬ ಸಂದೇಶ ಸಾರುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯು ಮಾನವಕುಲಕ್ಕೇ ಆದರ್ಶವಾಗಿದೆ ಎಂದು ಹೇಳಿದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್. ರುದ್ರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
‘ನಾನು ಬದಲಾದೆ ಅಂತ ಅಪ್ಪ-ಅಮ್ಮನಿಗೇ ಆಶ್ಚರ್ಯ’:
ಕಾರ್ಯಕ್ರಮದಲ್ಲಿ ತನ್ನ ಅನುಭವ ಹಂಚಿಕೊಂಡ ಶ್ರೀ ಸತ್ಯ ಸಾಯಿ ಸರ್ವನಿಕೇತನಂ ಗುರುಕುಲದ 8ನೇ ತರಗತಿ ವಿದ್ಯಾರ್ಥಿ, ಮೂಲತಃ ಭದ್ರಾಪುರ ಗ್ರಾಮದ ಸಚಿನ್, ‘ನಾನು ಈಗ ಸಾಕಷ್ಟು ಬದಲಾಗಿದ್ದೇನೆ. ನನಗೆ ಮೊದಲು ಹೆಚ್ಚು ಕೋಪ ಇತ್ತು. ಈಗ ನನ್ನನ್ನು ನೋಡಿದರೆ ನನ್ನ ಅಪ್ಪ-ಅಮ್ಮನೇ ಆಶ್ಚರ್ಯ ಪಡುತ್ತಾರೆ’ ಎಂದು ಹೇಳಿದರು.
‘ಗುರುಕುಲದಲ್ಲಿ ನನಗೆ ಪ್ರವೇಶ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ. ಮೊದಲು ನನಗೆ ಇಂಗ್ಲಿಷ್ ಎಂದರೆ ತುಂಬಾ ಭಯವಾಗುತಿತ್ತು, ಇಂದು ಇಂಗ್ಲಿಷ್ ಮಾತನಾಡಬಲ್ಲೆ. ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಸಮಾಜ, ಗಣಿತ, ವಿಜ್ಞಾನದಂತಹ ವಿಷಯಗಳ ಜೊತೆಗೆ ಪರಾ ವಿದ್ಯೆಯಾದ ವೇದ, ಉಪನಿಷತ್ತು, ಭಗವದ್ಗೀತೆ ಕಲಿಯುತ್ತಿದ್ದೇನೆ’ ಎಂದು ತಮ್ಮ ಇಷ್ಟದ ಸಂಸ್ಕೃತ ಸುಭಾಷಿತವನ್ನು ಹೇಳಿದರು.
ಶ್ರೀ ಸತ್ಯ ಸಾಯಿ ಸರ್ವನಿಕೇತನಂ’ ವಸತಿ ಶಾಲೆ ಬಗ್ಗೆ:
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕಮರೂರು ಗ್ರಾಮದಲ್ಲಿ ‘ಶ್ರೀ ಸತ್ಯ ಸಾಯಿ ಸರ್ವನಿಕೇತನಂ’ ವಸತಿ ಶಾಲೆಯು 2019 ರಿಂದ ಕಾರ್ಯನಿರ್ವಹಿಸುತ್ತಿದೆ. 40 ಎಕರೆ ವಿಸ್ತೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕ್ಯಾಂಪಸ್ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ 6ನೇ ತರಗತಿಯಿಂದ 8ನೇ ತರಗತಿಯವರೆಗೆ ಸುಮಾರು 200 ಮಕ್ಕಳು ಓದಿದ್ದಾರೆ. ಈ ಪೈಕಿ ಶೇ 67.50 ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯವರು. ಶೇ 42 ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಂದ ಬಂದವರು. ವಿಶೇಷ ಎಂದರೆ ಶೇ 69.10 ರಷ್ಟು ಕಲಿಕಾರ್ಥಿಗಳು ಮೊದಲ ತಲೆಮಾರಿನವರು. ಅಂದರೆ ಈ ಮಕ್ಕಳ ಕುಟುಂಬದಿಂದ ಯಾವುದೇ ಹಿರಿಯರು ಈ ಮೊದಲು ಉನ್ನತ ಶಿಕ್ಷಣ ಪಡೆದವರಲ್ಲ.
ಇದೇ ಕ್ಯಾಂಪಸ್ ಆವರಣದಲ್ಲಿ “ಸಾಯಿ ಸ್ವಾಸ್ಥ್ಯ ವೆಲ್ನೆಸ್ ಸೆಂಟರ್” ಕೂಡ ಕಾರ್ಯನಿರ್ವಹಿಸುತ್ತಿದ್ದು ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ.
ಪ್ರವೇಶ ಪ್ರಕ್ರಿಯೆ ಹೇಗೆ?
ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲ ಕ್ಯಾಂಪಸ್ಗಳಲ್ಲಿ 6ನೇ ತರಗತಿಗೆ ಪ್ರತಿ ವರ್ಷ 25 ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ. ಈ ಪೈಕಿ 15 ಸೀಟುಗಳನ್ನು ಆನ್ಲೈನ್ ಅರ್ಜಿಗಳ ಮೂಲಕ ಭರ್ತಿ ಮಾಡಲಾಗುತ್ತದೆ. ಉಳಿದ 10 ಸೀಟುಗಳನ್ನು ಕಡುಬಡವರಿಗಾಗಿ ಮೀಸಲಿಡಲಾಗುತ್ತದೆ.
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ:
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರು ಬೋಧಿಸಿದ ‘ಪ್ರೀತಿ ಮತ್ತು ಸೇವೆ’ಯ ಆದರ್ಶಗಳ ತಳಹದಿಯ ಮೇಲೆ, “ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್” ಹೆಸರಿನ ಬೃಹತ್ ಸೇವಾ ಅಭಿಯಾನವನ್ನು ಅವರು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ 100 ದೇಶಗಳಿಗೆ ವಿಸ್ತರಿಸಿರುವ ಈ ಅಭಿಯಾನದ ಮೂಲಕ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕ ಆಹಾರ ಕೋಟ್ಯಂತರ ಜನರಿಗೆ ಸಂಪೂರ್ಣ ಉಚಿತವಾಗಿ ಲಭ್ಯವಾಗುತ್ತಿವೆ.
ಸದ್ಗುರುಗಳ ಜೀವನ, ಸಾಧನೆ ಮತ್ತು ಕಾರ್ಯಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ www.owofmission.org ಜಾಲತಾಣಕ್ಕೆ ಭೇಟಿ ನೀಡಿ.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಖ್ಯಾತ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಶಿವಮೊಗ್ಗದಲ್ಲಿ “ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಸ್ವಾಗತಿಸಿದರು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ನ ವಿಶ್ವಸ್ಥರಾದ ಎಂ.ಎಸ್.ಸತ್ಯನಾರಾಯಣ ಚಿತ್ರದಲ್ಲಿದ್ದಾರೆ.
ಸೊರಬ ತಾಲ್ಲೂಕು ಕಮರೂರು ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಸರ್ವನಿಕೇತನಂ ವಿದ್ಯಾರ್ಥಿಗಳು “ದಿವ್ಯ ಸಂಜೆ” ಕಾರ್ಯಕ್ರಮದಲ್ಲಿ ವೇದ ಪಾರಾಯಣ ಮಾಡಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು “ದಿವ್ಯ ಸಂಜೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
“ದಿವ್ಯ ಸಂಜೆ” ಸಂವಾದದ ನಂತರ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ‘ಸಾಯಿ ಸಿಂಪೋನಿ’ ಆರ್ಕೆಸ್ಟ್ರಾ ಮೂಲಕ ಸಂಗೀತ ರಸದೌತಣ ನೀಡಿದರು