ಸಾಗರ: ತಾಲೂಕಿನ ತುಮರಿ ಸಮೀಪದ ಗೊರಗೋಡಿನಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ತಂದೆಯನ್ನೇ ಮಗ ಕೊಲೆ ಮಾಡಿ ಮೃತ ದೇಹವನ್ನು ಚಿಕ್ಕಪ್ಪನ ಜಮೀನಿನಲ್ಲಿರುವ ಬಾವಿಗೆ ಎಸೆದಿರುವ ಘಟನೆ ನಡೆದಿದೆ.
ಈ ಘಟನೆ ಮಂಗಳವಾರ ನಡೆದಿದ್ದು, ಗ್ರಾಮದ ಸುಬ್ರಾಯ (55) ಮೃತ ವ್ಯಕ್ತಿ. ಮಗ ಜಯಂತ್ ಆರೋಪಿ.
ತಂದೆಯ ಜೊತೆ ಜಗಳಕ್ಕಿಳಿದ ಜಯಂತ್, ಕತ್ತಿ ಹಾಗೂ ಕೋಲಿನಿಂದ ಹೊಡೆದು ತಮ್ಮ ಚಿಕ್ಕಪ್ಪನ ಗದ್ದೆಯಲ್ಲಿರುವ ಬಾವಿಗೆ ಶವವನ್ನು ಎಸೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಮೃತ ಸುಬ್ರಾಯ ತನ್ನ ತಂದೆ ಮತ್ತು ತಂಗಿಯನ್ನು ಕೊಲೆ ಮಾಡಿ ಸುಮಾರು 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದನು. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆತ ಇತ್ತೀಚೆಗೆ, ಅಂದರೆ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ವಾಪಸ್ ಬಂದಿದ್ದ ಎನ್ನಲಾಗಿದೆ.
ನಂತರ ಊರಿಗೆ ಬಾರದೇ ಬೇರೆ ಊರಿನಲ್ಲಿ ನೆಲೆಸಿ 5 ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ ಎಂದು ಪ್ರಕರಣ ದಾಖಲಿಸಿಕೊಂಡ ಕಾರ್ಗಲ್ ಠಾಣೆ ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖಾಧಿಕಾರಿಗಳೊಂದಿಗೆ ಚರ್ಚಿಸಿ, ಪ್ರರಕಣದ ತನಿಖೆಯ ಸಂಬಂಧ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು