ಶಿವಮೊಗ್ಗ : ನಕಲಿ ಸರ್ಕಾರಿ ದಾಖಲೆ, ಸ್ಟ್ಯಾಂಪ್ ಹಾಗೂ ವಿವಿಧ ಕಚೇರಿಗಳ ಮೊಹರುಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಆರೋಪಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 17,000 ದಂಡ ವಿಧಿಸಿ ಆದೇಶಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ನಗರದ ಎ.ಎನ್.ಕೆ. ರಸ್ತೆಯ ‘ಇಮೇಜ್ ಟೆಕ್ನಾಲಜೀಸ್’ ಕಂಪ್ಯೂಟರ್ ಅಂಗಡಿಯ ವಿಷ್ಣುಭಕ್ತ ಶಿಕ್ಷೆಗೆ ಗುರಿಯಾದ ಆರೋಪಿ. ಈತ ಮೋಸದ ಉದ್ದೇಶದಿಂದ ನಕಲಿ ದಾಖಲೆ ಹಾಗೂ ಮೊಹರುಗಳನ್ನು ತಯಾರಿಸಿ, ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿ ವಂಚಿಸುತ್ತಿದ್ದ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.