
ಶಿವಮೊಗ್ಗ, ಆ.13: ಬಿ.ವೈ.ರಾಘವೇಂದ್ರ ಅಭಿಮಾನಿ ಬಳಗದ ವತಿಯಿಂದ ಜನಪ್ರಿಯ ಸಂಸದ, ಅಭಿವೃದ್ದಿಯ ಹರಿಕಾರ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಹೊರಹೊಮ್ಮಿರುವ ಬಿ.ವೈ.ರಾಘವೇಂದ್ರ ಜನ್ಮದಿನ ಪ್ರಯುಕ್ತ ಆ.16 ರಂದು ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿಗಳ ಬಳಗದ ಪ್ರಮುಖರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಅಂದು ಬೆಳಿಗ್ಗೆ 7.30ಕ್ಕೆ ವಿನೋಬನಗರದ ಶಿವಾಲಯದಲ್ಲಿ ರುದ್ರಾಭಿಷೇಕ, 9 ಗಂಟೆಗೆ ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, 10.30ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಆಟೋ ಚಾಲಕರ ಸಂಘದಿಂದ ಸಿಹಿ ವಿತರಣೆ, 11.30ಕ್ಕೆ ನೆಹರು ಕ್ರೀಡಾಂಗಣದಲ್ಲಿ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಸಂಜೆ 6 ಗಂಟೆಗೆ ಗೋಪಾಳದಲ್ಲಿರುವ ಬಂಟರ ಭವನದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ನಾಗರೀಕ ಸನ್ಮಾನ ಏರ್ಪಡಿಸಲಾಗಿದ್ದು, ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅಭಿನಂದನಾ ನುಡಿಗಳನ್ನಾಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ. ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮಾಜಿ ಶಾಸಕರಾದ

ಎಸ್.ರುದ್ರೇಗೌಡ, ಆರ್.ಕೆ.ಸಿದ್ರಾಮಣ್ಣ ಸೇರಿದಂತೆ ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳು, ಮುಖಂಡರು ಮತ್ತು ಜಿಲ್ಲೆಯ ವಿವಿಧ ಸಮಾಜದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಅವರ ಅಭಿಮಾನಿಗಳು, ಗಣ್ಯರು ಉಪಸ್ಥಿತರಿದ್ದರು.

