
ಶಿವಮೊಗ್ಗ,ಸೆ.28:
ಶಿವಮೊಗ್ಗದಲ್ಲಿ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ, ರಾಗಿಗುಡ್ಡ ಹಾಗೂ ಓಂ, ಮತ್ತಿತರ ಗಣಪತಿ ಯ ರಾಜಬೀದಿ ಉತ್ಸವ ಎಂದರೆ ಸಾಕು, ಇಡೀ ನಗರದಲ್ಲೊಂದು ರೀತಿಯ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಈಗ ಎಸ್ಪಿ ನಿಖಿಲ್ ಅವರ ಇಡೀ ಪೊಲೀಸ್ ತಂಡದ ಕಾರ್ಯ ಶಹಬ್ಬಾಸ್ ಗಿರಿ ನೀಡಿದ್ದಲ್ಲದೇ ತಮಗೆ ಸಿಕ್ಕ ದೈರ್ಯಕ್ಕೆ ಜನರೇ ನಮನ ಹೇಳಿದ್ದಾರೆ.
ಹಿಂದೆ “ಅಲ್ಲೇನೋ ಆಯ್ತಂತೆ, ಇಲ್ಲೇನೋ ಅನಾಹುತ ನಡೀತಂತೆ…” ಎಂಬಂತಹ ಕಟ್ಟುಕಥೆಗಳು, ವೈರಲ್ ವದಂತಿಗಳು ಜನರನ್ನು ಮನೆಯಿಂದ ಹೊರಬರದಂತೆ ಕಟ್ಟಿಹಾಕುತ್ತಿದ್ದವು.

ಆದರೆ, ಕಾಲ ಬದಲಾಗಿದೆ! ದಶಕಗಳಿಂದ ಅಂಟಿಕೊಂಡಿದ್ದ ಹಿಂದೂಮಹಾಸಭಾ ಗಣಪತಿ ಎಂಬ ಅಪವಾದವನ್ನು ಸಂಪೂರ್ಣವಾಗಿ ತೊಡೆದುಹಾಕಿ, ಸೆ.25ರಂದು ಶಿವಮೊಗ್ಗದ ಗಣೇಶ ವಿಸರ್ಜನಾ ಮೆರವಣಿಗೆಯು ಶಾಂತಿ, ಸೌಹಾರ್ದತೆ ಮತ್ತು ಅದ್ದೂರಿ ವೈಭವದ ಸಂಕೇತವಾಗಿ ಮರುಜೀವ ಪಡೆದಿದೆ.

ಈ ಐತಿಹಾಸಿಕ ಬದಲಾವಣೆಯ ಹಿಂದೆ ನಿಂತಿರುವುದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಐಪಿಎಸ್ ಅವರ ಖಡಕ್ ಹಾಗೂ ತಾಂತ್ರಿಕ ಕಾರ್ಯತಂತ್ರ.
ಆದರೆ ಕಾಲ ಬದಲಾಗಿದೆ. ಪರಿಸ್ಥಿತಿಯೂ ಬದಲಾಗಿದೆ. ಈ ಬದಲಾವಣೆಯ ಹಿಂದೆ ಸಾರ್ವಜನಿಕರ ಸಹಕಾರದ ಜೊತೆಗೆ ಮುನ್ನೆಚ್ಚರಿಕೆ, ಸಮರ್ಪಕ ಬಂದೋಬಸ್ತ್, ಗುಪ್ತಚರ ಮಾಹಿತಿ, ತಂತ್ರಜ್ಞಾನದ ಬಳಕೆ ಮತ್ತು ಪೊಲೀಸ್ ಇಲಾಖೆಯ ಸಂಘಟಿತ ಕಾರ್ಯಾಚರಣೆ ಪ್ರಮುಖ ಪಾತ್ರ ವಹಿಸಿದೆ.

ಸೆ.25ರಂದು ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಇದಕ್ಕೆ ಮತ್ತೊಂದು ಉದಾಹರಣೆಯಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ.
ಮೊನ್ನೆ ಲಕ್ಷಾಂತರ ಜನರು ಭಾಗವಹಿಸಿದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೆರವಣಿಗೆ ಶಾಂತಿಯುತವಾಗಿ ಸಾಗಿದ್ದು, ಶಿವಮೊಗ್ಗದ ಪೊಲೀಸ್ ಇಲಾಖೆಯ ಸಿದ್ಧತೆ ಮತ್ತು ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುವಂತಾಯಿತು.

ಈ ಸಂಪೂರ್ಣ ಬಂದೋಬಸ್ತ್ ವ್ಯವಸ್ಥೆಯ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ನಿಖಿಲ್ ಅವರು ಮುನ್ನೆಚ್ಚರಿಕೆ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಮೇಲಾಧಿಕಾರಿಗಳಾದ ಬಿಜಯ್ ಕುಮಾರ್ ಸಿಂಗ್, ಐಪಿಎಸ್., ಎಡಿಜಿಪಿ, ಸಿಐಡಿ, ಬೆಂಗಳೂರು ಹಾಗೂ ಎನ್. ಸತೀಶ್ ಕುಮಾರ್, ಐಪಿಎಸ್., ಐಜಿಪಿ, ಪೂರ್ವ ವಲಯ, ದಾವಣಗೆರೆ ಅವರ ಮಾರ್ಗದರ್ಶನದಲ್ಲಿಯೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದು ವಿಶೇಷ.

ಜಿಲ್ಲಾಡಳಿತ ಹಾಗೂ ರಕ್ಷಣಾ ಇಲಾಖೆ ಕಾರ್ಯವನ್ನು ಸಚಿವ ಮಧುಬಂಗಾರಪ್ಪ, ಶಾಸಕ ಚನ್ನಬಸಪ್ಪ, ಇಡೀ ಹಿಂದೂ ಮಹಾಸಭಾ ಸಂಘಟನೆ ಅಭಿನಂದಿಸಿದೆ.


