ಶಿವಮೊಗ್ಗ: ಗೋವಿಂದಪುರದಲ್ಲಿ ಆಶ್ರಯ ಯೋಜನೆಯಡಿ ಮನೆಗಾಗಿ ಹಣ ಪಾವತಿಸಿ ಒಂಬತ್ತು ವರ್ಷಗಳಿಂದ ಕಾಯುತ್ತಿರುವ ಫಲಾನುಭವಿಗಳಿಗೆ ಮನೆ ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಜನವರಿಯೊಳಗೆ 600 ನಿವೇಶನಗಳನ್ನು ವಿತರಿಸುವುದಾಗಿ ಮಹಾನಗರ ಪಾಲಿಕೆ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ರಾಷ್ಟ್ರಭಕ್ತ ಬಳಗದ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಿಂದಪುರದಲ್ಲಿ ಒಟ್ಟು 3 ಸಾವಿರ ಆಶ್ರಯ ನಿವೇಶನಗಳನ್ನು ಹಂಚಬೇಕಿದ್ದು, ಈವರೆಗೆ 450 ಮನೆಗಳನ್ನು ನಿರ್ಮಿಸಿ ವಿತರಿಸಲಾಗಿದೆ. ಹಣ ಪಾವತಿಸಿ ಒಂಬತ್ತು ವರ್ಷ ಕಳೆದರೂ ಮನೆ ಸಿಗದಿರುವುದನ್ನು ಖಂಡಿಸಿ ಅ.27ರಂದು ರಾಷ್ಟ್ರಭಕ್ತ ಬಳಗದ ವತಿಯಿಂದ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿತ್ತು. ಆಯುಕ್ತರ ಭರವಸೆಯಂತೆ ನ.11ರಂದು 32 ಫಲಾನುಭವಿಗಳಿಗೆ ಮನೆಗಳ ಕೀಲಿ ಹಸ್ತಾಂತರಿಸಲಾಗಿದೆ ಎಂದರು.

ಉಳಿದ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳ ಆದೇಶದಂತೆ ಪಾಲಿಕೆ ಆಯುಕ್ತರು ಗುತ್ತಿಗೆದಾರರಿಗೆ ₹5 ಕೋಟಿ ಬಿಡುಗಡೆ ಮಾಡಿದ್ದಾರೆ. ನ.15ರಂದು ಫಲಾನುಭವಿಗಳನ್ನು ಗೋವಿಂದಪುರಕ್ಕೆ ಕರೆದೊಯ್ದು ಕಾಮಗಾರಿಯ ಪ್ರಗತಿ ಪರಿಶೀಲನೆ ಮಾಡಿಸಲಾಗುವುದು. ಮುಂದಿನ 10 ದಿನಗಳಲ್ಲಿ 74 ನಿವೇಶನ ಹಾಗೂ ಜನವರಿಯೊಳಗೆ 600 ನಿವೇಶನಗಳನ್ನು ವಿತರಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಹೋರಾಟಕ್ಕೆ ಸ್ಪಂದಿಸಿ ಮನೆಗಳ ವಿತರಣೆಗೆ ಕ್ರಮ ಕೈಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಪಾಲಿಕೆ ಆಯುಕ್ತರಿಗೆ ಅಭಿನಂದನೆ ಸಲ್ಲಿಸಿದರು. ಒಟ್ಟು 3 ಸಾವಿರ ನಿವೇಶನಗಳ ಪೈಕಿ ವಿತರಣೆ ಬಳಿಕ ಸುಮಾರು 1,800 ನಿವೇಶನಗಳು ಉಳಿಯಲಿವೆ. ಅವುಗಳ ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಮುಚ್ಚಲು ಬಿಡುವುದಿಲ್ಲ. ಆರಂಭವಾದ ಕೆಲವೇ ವರ್ಷಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ. ಈಗಾಗಲೇ ಎರಡು ವಿಮಾನಯಾನ ಸಂಸ್ಥೆಗಳು ಹಾರಾಟ ಸ್ಥಗಿತಗೊಳಿಸಿದ್ದು, ನ.21ರಿಂದ ಮತ್ತೊಂದು ಸಂಸ್ಥೆಯೂ ಬುಕಿಂಗ್ ಸ್ಥಗಿತಗೊಳಿಸುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಂಡರೆ ನೂರಾರು ಕೋಟಿ ರೂಪಾಯಿ ವ್ಯರ್ಥವಾಗಲಿದೆ. ವಿಮಾನ ನಿಲ್ದಾಣ ಅಸ್ಥಿಪಂಜರವಾಗುವುದನ್ನು ತಡೆಯಲು ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು, ರಾಜಕೀಯೇತರ ಸಂಘಟನೆಗಳು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಗಳು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರಭಕ್ತ ಬಳಗ ಯಾವುದೇ ಹೋರಾಟಕ್ಕೂ ಸಿದ್ಧವಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಲು, ಮೋಹನ್ ಜಾಧವ್, ಶಿವಾಜಿ, ನಾಗಣ್ಣ, ಎಂ. ರಾಜು, ಗೋವಿಂದಣ್ಣ, ಆನಂದ್, ಕುಬೇರಪ್ಪ ಮತ್ತಿತರರು ಇದ್ದರು.