ಶಿವಮೊಗ್ಗ: ’ದಡ್ಡ ಕುರುಬ’ ಎಂದು ಜಾತಿ ಉಲ್ಲೇಖಿಸಿ ಅವಹೇಳನಕಾರಿಯಾಗಿ ಮಾತನಾಡಿರುವ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ತಮ್ಮ ಹೇಳಿಕೆಗೆ ಸಮುದಾಯದ ಮುಂದೆ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಸುಂದರೇಶ್ ಅವರು ನನ್ನ ಸ್ನೇಹಿತರೇ. ಆದರೆ ನನ್ನನ್ನು ಟೀಕಿಸುವ ಸಂದರ್ಭದಲ್ಲಿ ಜಾತಿ ಉಲ್ಲೇಖಿಸಿ ಅವಹೇಳನ ಮಾಡಿರುವುದು ನೋವು ತಂದಿದೆ. ಜಾತಿಯ ಹೆಸರಿನಲ್ಲಿ ವ್ಯಕ್ತಿಯನ್ನು ಟೀಕಿಸುವುದು ಸರಿಯಲ್ಲ. ಹೀಗಾಗಿ ಅವರು ನನ್ನ ಸಮುದಾಯದ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

’ಕ್ಷಮೆಯಾಚಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಸಮುದಾಯದ ಜನರು ಸೂಕ್ತ ಉತ್ತರ ನೀಡಲಿದ್ದಾರೆ’ ಎಂದರು.
’ನಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಸಮಸ್ಯೆಗಳು, ಪಕ್ಷದ ವಿಚಾರಗಳು ಹಾಗೂ ಸ್ಥಳೀಯ ವಿ?ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹಲವು ಬಾರಿ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಆದರೆ ನಾನು ಹೇಳಿದಂತೆ ಸಚಿವರು ಎಲ್ಲವನ್ನೂ ಕೇಳುತ್ತಿದ್ದರು ಎಂಬ ರೀತಿಯಲ್ಲಿ ಸುಂದರೇಶ್ ಹೇಳಿರುವುದು ಸರಿಯಲ್ಲ. ಅವರು ಸರ್ಕಾರದ ಸಚಿವರಾಗಿದ್ದು, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ’ ಎಂದು ಸ್ಪ?ಪಡಿಸಿದರು.
’ಜಿಲ್ಲೆಯ ಅಭಿವೃದ್ಧಿ ವಿಚಾರಗಳಲ್ಲಿ ಸಚಿವರೊಂದಿಗೆ ಚರ್ಚೆ ನಡೆಸುವುದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಅಗತ್ಯವಿಲ್ಲ. ಪಕ್ಷದ ಜಿಲ್ಲಾ ಅಧ್ಯಕ್ಷನಾಗಿ ಜಿಲ್ಲೆಯ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರುವುದು ಸಹಜ ಜವಾಬ್ದಾರಿ’ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ವ್ಯವಸ್ಥೆ ಇದೆ. ಎಐಸಿಸಿ ವೀಕ್ಷಕರು ಸೇರಿದಂತೆ ಪಕ್ಷದ ವಿವಿಧ ಹಂತದ ನಾಯಕರು ಜಿಲ್ಲೆಗೆ ಆಗಮಿಸಿ ಪಕ್ಷದ ಸಂಘಟನೆ ಹಾಗೂ ರಾಜಕೀಯ ವಿಚಾರಗಳನ್ನು ನಿರ್ವಹಿಸುವ ವ್ಯವಸ್ಥೆಯಿದೆ. ಪಕ್ಷದ ಈ ವ್ಯವಸ್ಥೆಯನ್ನು ಸುಂದರೇಶ್ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.

ಕಾಡಾ ಮತ್ತು ಸ್ಬುಡಾ ಸಂಸ್ಥೆಗಳ ಬಗ್ಗೆಯೂ ಸುಂದರೇಶ್ ಅವರು ಟೀಕೆ ಮಾಡಿದ್ದಾರೆ. ಈ ಸಂಸ್ಥೆಗಳಲ್ಲಿ ಅಧಿಕಾರ ಹಾಗೂ ಅವಕಾಶ ಪಡೆದಿರುವ ಸಂದರ್ಭದಲ್ಲಿ ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ’ಪಕ್ಷದಲ್ಲಿ ಪ್ರತಿಯೊಬ್ಬರಿಗೂ ಎಲ್ಲ ಹುದ್ದೆಗಳೂ ದೊರೆಯುವುದಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ದೊರೆಯಲಿಲ್ಲ ಎಂಬ ಕಾರಣಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವುದು ರಾಜಕೀಯ ಹಿರಿತನಕ್ಕೆ ತಕ್ಕದ್ದಲ್ಲ’ ಎಂದು ಹೇಳಿದರು.
’ಇನ್ನೂ ಹಲವು ವಿಚಾರಗಳಿವೆ. ಅವುಗಳನ್ನು ಬಹಿರಂಗವಾಗಿ ಚರ್ಚಿಸುವ ಬದಲು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಿ ಸೂಕ್ತ ರೀತಿಯಲ್ಲಿ ಚರ್ಚಿಸಲಾಗುವುದು. ವೈಯಕ್ತಿಕ ಟೀಕೆಗಳಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ. ಪಕ್ಷದ ಸಂಘಟನೆ ಬಲಪಡಿಸುವುದು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುವುದು ಎಲ್ಲರ ಜವಾಬ್ದಾರಿ’ ಎಂದರು.

ಸಚಿವರನ್ನು ಪರಿಗಣಿಸಿಲ್ಲ
’ಸ್ಬೂಡಾ ಅಧ್ಯಕ್ಷರಾದ ಬಳಿಕ ಎಚ್.ಎಸ್. ಸುಂದರೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಒಂದೇ ಒಂದು ಕಾರ್ಯಕ್ರಮಕ್ಕೂ ಆಹ್ವಾನಿಸಿಲ್ಲ. ಸರ್ಕಾರದ ಅನುದಾನದಲ್ಲಿ ಜಾಹೀರಾತು ನೀಡಲಾಗಿದ್ದು, ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರವನ್ನು ಬಳಸಿಲ್ಲ’ ಎಂದು ಪ್ರಸನ್ನಕುಮಾರ್ ಆರೋಪಿಸಿದರು.