ಶಿವಮೊಗ್ಗ ,ಸೆ.24: ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಡಿ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ತಲುಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಅದರಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ನೂತನ ಶಿವಮೊಗ್ಗ ಜಿ.ಪಂ ಸಿಇಓ ರಿಷಿ ಆನಂದ್ ತಿಳಿಸಿದರು.

ಗುರುವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಚೇರಿಯಲ್ಲಿ ರಿಜಿಸ್ಟರ್ಗೆ ಸಹಿ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜನಪರವಾದ ವಿವಿಧ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಒತ್ತು ನೀಡಲಿದ್ದು, ಪ್ರಸ್ತುತ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂಬುದು ಆಲಿಸಿ ಆ ಸಮಸ್ಯೆ ಕೂಡಲೇ ಬಗೆ ಹರಿಸುವಂತೆ ಕಾರ್ಯನಿರ್ವಹಿಸಲಿದ್ದು, ಇದೇ ನಮ್ಮ ಪ್ರಮುಖ ಆದ್ಯತೆಯಾಗಿದೆ. ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವುದು ಹಾಗೂ ಉತ್ತಮ ಆಡಳಿತ ನೀಡುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
ಈ ಕಾರ್ಯಗಳಲ್ಲಿ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಮಾಧ್ಯಮಗಳ ಸಹಕಾರ ಮತ್ತು ಸಹಯೋಗವನ್ನು ಕೋರಿದರು.