ಗೋವರ್ಧನ ಟ್ರಸ್ಟ್; ನ.9ರಂದು ದೀಪಾವಳಿ ಗೋಪೂಜೆ
ಶಿವಮೊಗ್ಗ: ಗೋವರ್ಧನ ಟ್ರಸ್ಟ್ ವತಿಯಿಂದ ನ.9ರಂದು ನಗರದ ನಾಲ್ಕು ಸ್ಥಳಗಳಲ್ಲಿ ದೀಪಾವಳಿ ಗೋಪೂಜೆ ಆಯೋಜಿಸಲಾಗಿದೆ ಎಂದು ನಾಗಸುಬ್ರಮಣ್ಯ ದೇವಸ್ಥಾನ ಪ್ರಧಾನ ಅರ್ಚಕ ಸಂದೇಶ ಉಪಾಧ್ಯಾಯ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8ರಿಂದ 11ರವರೆಗೆ ಗೋಪೂಜೆ ನಡೆಯಲಿದೆ. ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಸ್ವತಃ ಗೋಪೂಜೆ ಸಲ್ಲಿಸಲು ಅವಕಾಶವಿದ್ದು, ಯಾವುದೇ ಸೇವಾ ಶುಲ್ಕ ಇರುವುದಿಲ್ಲ ಎಂದರು.

ವಿನೋಬನಗರದ ಶಿವಾಲಯ, ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಮಣ್ಯ ದೇವಸ್ಥಾನ, ಕೋಟೆ ರಸ್ತೆಯ ವಾಸವಿ ಪಬ್ಲಿಕ್ ಶಾಲೆ ಹಾಗೂ ರವೀಂದ್ರನಗರದ ಗಣಪತಿ ದೇವಸ್ಥಾನಗಳಲ್ಲಿ ಪೂಜೆ ನಡೆಯಲಿದೆ. ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಟ್ರಸ್ಟ್ ಅಧ್ಯಕ್ಷ ಕಾಂತೇಶ್ ಈಶ್ವರಪ್ಪ ಉಪಸ್ಥಿತರಿರುವರು ಎಂದರು.

ಗೋವಿನ ರಕ್ಷಣೆ ಎಲ್ಲರ ಹೊಣೆಗಾರಿಕೆಯಾಗಿದ್ದು, ಗೋಮಾತೆಯ ಆರಾಧನೆ ಮತ್ತು ಭಾರತೀಯ ಸಂಸ್ಕೃತಿಯ ಗೌರವದ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಟ್ರಸ್ಟ್ ಅಧ್ಯಕ್ಷ ಕಾಂತೇಶ್ ಈಶ್ವರಪ್ಪ, ನವ್ಯಶ್ರೀ ನಾಗೇಶ್, ರುದ್ರಾರಾಧ್ಯ, ಗುರುಗುಹ ನಾಗರಾಜ್,ಹರೀಶ್ ಕಾರ್ನಿಕ್, ದಿನೇಶ್, ಶೇಷಾಚಲ, ಆಚಾರ್ ಇದ್ದರು.
ಪಾಡ್ಯಮಿ ತಿಥಿ ಹಿನ್ನೆಲೆ, ಸೋಮವಾರವೇ ಗೋಪೂಜೆದೀಪಾವಳಿ ಹಬ್ಬದ ಆಚರಣೆಯಲ್ಲಿ ತಿಥಿಗಳಿಗೆ ವಿಶೇಷ ಮಹತ್ವವಿದ್ದು, ಈ ಬಾರಿ ಪಾಡ್ಯಮಿ ತಿಥಿ ಹೆಚ್ಚಿನ ಅವಧಿ ಇರುವ ಹಿನ್ನೆಲೆಯಲ್ಲಿ ಸೋಮವಾರವೇ ಗೋಪೂಜೆ ನಡೆಸಲು ನಿರ್ಧರಿಸಲಾಗಿದೆ ಎಂದು ಅರ್ಚಕ ಸಂದೇಶ ಉಪಾಧ್ಯಾಯ ಹೇಳಿದರು.ದೀಪಾವಳಿ ಆಚರಣೆಯ ಅಂಗವಾಗಿ ಶನಿವಾರ (ನ. 7)ನೀರು ತುಂಬುವ ಹಬ್ಬ ಆಚರಿಸಲಾಗುತ್ತದೆ. ಭಾನುವಾರ (ನ.8) ಬೆಳಿಗ್ಗೆ ಅಭ್ಯಂಗ ಸ್ನಾನ (ಎಣ್ಣೆ ಸ್ನಾನ) ಮಾಡಿ, ಸಂಜೆ ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತದೆ. ಭಾನುವಾರ ಮಧ್ಯಾಹ್ನ 2.30ರ ನಂತರ ಅಮಾವಾಸ್ಯೆ ಆರಂಭವಾಗುವುದರಿಂದ ಸಂಜೆ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ ಎಂದು ವಿವರಿಸಿದರು.ನ. 9ರ ಸೋಮವಾರ ಬೆಳಿಗ್ಗೆ 9 ಗಂಟೆಯವರೆಗೆ ಅಮಾವಾಸ್ಯೆ ತಿಥಿ ಇರಲಿದ್ದು, ಬೆಳಿಗ್ಗೆ 6.30ರಿಂದ 7 ಗಂಟೆಯ ಅವಧಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಬಹುದು. ಬಳಿಕ ಪಾಡ್ಯಮಿ ತಿಥಿ ಆರಂಭವಾಗಲಿದೆ. ಈ ತಿಥಿ 20 ಘಳಿಗೆಗಳಿಗಿಂತ ಹೆಚ್ಚು ಕಾಲ ಇರುವುದರಿಂದ ಸೋಮವಾರ ಗೋಪೂಜೆ ನಡೆಸುವುದು ಶಾಸ್ತ್ರೋಕ್ತವಾಗಿದೆ. ಮಂಗಳವಾರ (ನ. 10)ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ಪಾಡ್ಯಮಿ ತಿಥಿ ಇರುವುದರಿಂದ ಸೋಮವಾರವೇ ಗೋಪೂಜೆಗೆ ಸೂಕ್ತ ದಿನವಾಗಿದೆ ಎಂದು ತಿಳಿಸಿದರು.
ಗೋಮಾತೆಯೇ ರಾಜ್ಯ ಸರ್ಕಾರಕ್ಕೆ ಬುದ್ಧಿ ನೀಡಲಿ
ಬೆಲೆ ಏರಿಕೆ ನಿರ್ಧಾರ ಹಿಂಪಡೆಯಲಿ: ಈಶ್ವರಪ್ಪ ಒತ್ತಾಯ
ಶವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಲೆ ಏರಿಸುವ ಮೂಲಕ ರಾಜ್ಯ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದೆ. ಏರಿಸಿರುವ ಬೆಲೆಯನ್ನು ಇಳಿಸುವ ಬುದ್ಧಿಯನ್ನು ಗೋಮಾತೆ ಸರ್ಕಾರಕ್ಕೆ ನೀಡಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೆಲೆ ಏರಿಕೆ ನಿರ್ಧಾರವನ್ನು ಟೀಕಿಸಿದರು.‘ನಾನು ಭಾವನೆಯೊಂದಿಗೆ ರಾಜಕಾರಣ ಮಾಡುವುದಿಲ್ಲ, ಬದುಕಿನೊಂದಿಗೆ ರಾಜಕಾರಣ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಹೇಳಿದ್ದರು. ಆದರೆ, ಗೋಪೂಜೆಯಲ್ಲಿ ಭಾವನೆ ಮತ್ತು ಬದುಕು ಎರಡೂ ಅಡಕವಾಗಿವೆ. ಗೋವನ್ನು ತಾಯಿಯ ರೂಪದಲ್ಲಿ ಪೂಜಿಸುವುದು ನಮ್ಮ ಭಾವನೆಯಾದರೆ, ಬದುಕಿಗೂ ಗೋಮಾತೆಯೇ ಆಧಾರ. ಭಾವನೆ ಮತ್ತು ಬದುಕಿನ ನಡುವಿನ ಸಂಬಂಧವನ್ನು ಗೋಮಾತೆ ಕಲಿಸುತ್ತಾಳೆ ಎಂದರು.ಜನರ ಅಪೇಕ್ಷೆಯಂತೆ ರಾಜ್ಯದಲ್ಲಿ ಹೆಚ್ಚಿನ ಗೋಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಬೇಕು. ಸರ್ಕಾರವೇ ಜಾಗ ನೀಡಿದರೂ ಅಲ್ಲಿ ನಿರ್ಮಿಸಿರುವ ಗೋಶಾಲೆಯನ್ನು ಅರಣ್ಯ ಇಲಾಖೆಯ ಜಾಗ ಎಂದು ಹೇಳಲಾಗುತ್ತಿದೆ. ಗೋಶಾಲೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.