ಶಿವಮೊಗ್ಗ, ನ. 7: ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು 10ರಿಂದ 12 ವರ್ಷ ವಯಸ್ಸಿನ ಗಂಡು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಇಚವಾಡಿ ಗ್ರಾಮದ ಸರ್ವೆ ನಂ. 16ರ ಭತ್ತದ ಗದ್ದೆಯ ಬದುವಿನಲ್ಲಿ ನಡೆದಿದೆ.

ನ. 7ರ ಬೆಳಗಿನ ಜಾವ ಘಟನೆ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮೃತ ಕಾಡಾನೆಯ ಸುತ್ತಮುತ್ತ ವಿದ್ಯುತ್ ತಂತಿಗಳು ಕಂಡುಬಂದಿವೆ. ಅಲ್ಲದೆ, ಸಮೀಪದಲ್ಲಿ ವಿದ್ಯುತ್ ತಂತಿ ಕೆಳಗೆ ಬಿದ್ದಿರುವುದು ಪತ್ತೆಯಾಗಿದೆ. ಪ್ರಾಥಮಿಕ ಪರಿಶೀಲನೆಯ ಆಧಾರದ ಮೇಲೆ ವಿದ್ಯುತ್ ಸ್ಪರ್ಶದಿಂದಲೇ ಕಾಡಾನೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ಅಲಿಮಿಯಾ ಬಿನ್ ಫೀರ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ ಕಾಡಾನೆ ಸಾವಿಗೆ ಕಾರಣನಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಈ ಸಂಬಂಧ ಅರಣ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ನ. 9ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.
ಹಾಗೆಯೇ, ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ Electricity Act ಅಡಿಯಲ್ಲಿ ಮೆಸ್ಕಾಂ (MESCOM) ಅಧಿಕಾರಿಗಳಿಗೂ ದೂರು ನೀಡಲಾಗಿದೆ. ನಿಯಮಿತ ಕಾರ್ಯವಿಧಾನದ (SOP) ಪ್ರಕಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.