ಶಿವಮೊಗ್ಗ: ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹಾಪ್ಕಾಮ್ಸ್ ಕಚೇರಿಯ ಕೆಳಭಾಗದಲ್ಲಿ ಹಾಪ್ಸ್ಕಾಮ್ ವತಿಯಿಂದ ಇಂದು ನೂತನ ಹಣ್ಣು ಮತ್ತು ಜ್ಯೂಸ್ ಮಾರಾಟ ಮಳಿಗೆ ಆರಂಭವಾಯಿತು.

ನೂತನ ಮಳಿಗೆಗೆ ಹಲವು ಗಣ್ಯರು, ಶಾಸಕರು, ಹಾಪ್ಕಾಮ್ಸ್ ಪದಾಧಿಕಾರಿಗಳು ಭೇಟಿ ನೀಡಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯ ಕುಲಪತಿ ಡಾ.ಎಂ.ವಿ.ಧನಂಜಯ, ಶಿವಮೊಗ್ಗದಲ್ಲಿ ಈ ರೀತಿಯ ಮಳಿಗೆಗಳು ತೆರೆಯುವುದು ಸ್ವಾಗತರ್ಹವಾಗಿದೆ. ರೈತರಿಗೂ ಕೂಡ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಕೃಷಿ ವಿವಿಯಲ್ಲಿ ಉತ್ಪನ್ನವಾಗುವ ಹಣ್ಣುಗಳನ್ನು ಹಾಪ್ಕಾಮ್ಸ್ ಮೂಲಕ ಮಾರಾಟ ಮಾಡಲು ಯೋಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಪ್ಕಾಮ್ಸ್ ಜೊತೆ ಚರ್ಚಿಸಲಾಗುವುದು ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಋತುಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ವಿವಿಧ ಬಗೆಯ ದೇಶಿ ಹಾಗೂ ವಿದೇಶಿ ಹಣ್ಣುಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಈ ಮಳಿಗೆ ಸ್ಥಾಪಿತವಾಗಿದೆ. ರೈತರಿಂದ ನೇರ ಖರೀದಿ ಆಗುವುದರಿಂದ ರೈತರಿಗೂ ಗ್ರಾಹಕರಿಗೂ ಅನುಕೂಲವಾಗುತ್ತದೆ. ಮತ್ತು ತಾಜಾ ಹಣ್ಣುಗಳು ದೊರೆತಂತಾಗುತ್ತದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇದೊಂದು ಒಳ್ಳೆಯ ಪ್ರಯತ್ನವಾಗಿದೆ. ಇಂತಹ ಪ್ರಯತ್ನಗಳು ಹೆಚ್ಚೆಚ್ಚು ಆಗಬೇಕು. ತಾಜಾ ಹಣ್ಣುಗಳು, ಗುಣಮಟ್ಟದ ಹಣ್ಣುಗಳು ದೊರೆತಾಗ ಆರೋಗ್ಯ ಕೂಡ ಉತ್ತಮವಾಗುತ್ತದೆ ಎಂದು ಶುಭ ಹರಸಿದರು.

ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ಕುಮಾರ್(ದನಿ) ಮಾತನಾಡಿ, ಮಾರುಕಟ್ಟೆಯಲ್ಲಿ ಆಯಾ ಕಾಲಕ್ಕೆ ಲಭ್ಯವಾಗುವ ಎಲ್ಲ ಬಗೆಯ ಹಣ್ಣುಗಳನ್ನು ಮಳಿಗೆಯಲ್ಲಿ ಇರಿಸಲು ಉದ್ದೇಶಿಸಲಾಗಿದೆ. ಲಿಚ್ಚಿ, ರಾಂಬುಟಾನ್, ಲಾಂಗನ್, ಆಸ್ಟ್ರೇಲಿಯನ್ ದ್ರಾಕ್ಷಿ, ಸ್ಟಾರ್ ಫ್ರೂಟ್, ಡ್ರ್ಯಾಗನ್ ಫ್ರೂಟ್, ಚೆರ್ರಿ, ಮ್ಯಾಂಡರಿನ್, ಕಿವಿ, ಸೀಡ್ಲೆಸ್ ದ್ರಾಕ್ಷಿ, ನೇರಳೆ, ಬ್ಲೂಬೆರ್ರಿ ಹಾಗೂ ಸ್ಟ್ರಾಬೆರಿ ಸೇರಿದಂತೆ ವಿವಿಧ ಬಗೆಯ ದೇಶಿ ಮತ್ತು ವಿದೇಶಿ ಹಣ್ಣುಗಳು ಲಭ್ಯವಿರಲಿವೆ. ಇದರ ಜೊತೆಗೆ ತಾಜಾ ಹಣ್ಣಿನ ಜ್ಯೂಸ್ ಮಾರಾಟ ಮಾಡಲಾಗುವುದು. ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವುದು ಸಂಸ್ಥೆಯ ಉದ್ದೇಶ ಎಂದರು.

ಮಳಿಗೆ ನಿರ್ವಹಣೆಯ ಹೊಣೆ ಹೊತ್ತಿರುವ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಮಾತನಾಡಿ, ಈ ಮಳಿಗೆಯೂ ಇಂದಿನಿಂದ ಆರಂಭವಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬೇಕು. ಇಲ್ಲಿ ಕೇವಲ ನಮ್ಮ ದೇಶದ ಹಣ್ಣುಗಳಲ್ಲದೆ ವಿದೇಶಿಯ ಹಣ್ಣುಗಳು ಕೂಡ ಕೈಗೇಟುಕುವ ಬೆಲೆಯಲ್ಲಿ ಸಿಗುತ್ತದೆ. ಮುಖ್ಯವಾಗಿ ರಾಸಾಯನಿಕ ಬಳಕೆ ಇಲ್ಲದ ಸಾವಯವ ಗೊಬ್ಬರದಿಂದ ಬೆಳೆದ ಹಣ್ಣುಗಳು ಲಭ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ಅಕ್ಷಯ್, ಕೃಷಿ ವಿವಿಯ ನಿರ್ದೇಶಕ ಶಶಾಂಕ್, ನಿರ್ದೇಶಕರಾದ ಶರತ್ ಮರಿಯಪ್ಪ, ನಾಗೇಶ್ ನಾಯ್ಕ್, ನಾಗರಾಜ್, ಕಾಂತರಾಜ್, ಮೋಹನ್ ಗೌಡ, ಉಂಬ್ಳೆಬೈಲು ಮೋಹನ್, ಚಂದ್ರೇಗೌಡ, ಅರುಣ ನಾಯ್ಡು, ನಾಗರಾಜಪ್ಪ, ಹರ್ಷ ಬೆಳ್ಳೂರು ಸೇರಿದಂತೆ ಇನ್ನಿತರರು ಇದ್ದರು.