ಶಿವಮೊಗ್ಗ: ಬಡ ಮತ್ತು ಅರ್ಹ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ತ್ವರಿತವಾಗಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಹಾಗೂ ಯುವ ನಾಯಕರಾದ ಕೆ.ಇ.ಕಾಂತೇಶ್ ಅವರು ವಿಶೇಷ ಆಸಕ್ತಿ ವಹಿಸಿದ್ದು, ಈ ಸಂಬಂಧ ರಾಷ್ಟ್ರಭಕ್ತರ ಬಳಗದ ಸದಸ್ಯರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಆಶ್ರಯ ಮನೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಹಲವು ವರ್ಷಗಳಿಂದ ಸ್ವಂತ ಮನೆಯ ಕನಸು ಕಾಣುತ್ತಿರುವ ಬಡ ಕುಟುಂಬಗಳಿಗೆ ಆದಷ್ಟು ಬೇಗ ಮನೆಗಳನ್ನು ಹಂಚಿಕೆ ಮಾಡಬೇಕು ಎಂಬ ಉದ್ದೇಶದಿಂದ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗಮನ ಸೆಳೆಯಲಾಯಿತು.

ಸಭೆಯಲ್ಲಿ ಒಟ್ಟು 1,200 ಆಶ್ರಯ ಮನೆಗಳ ಪೈಕಿ ಈಗಾಗಲೇ 600 ಮನೆಗಳ ಹಂಚಿಕೆ ಆಗಿರುವ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ, 15 ಮನೆಗಳ ಕೀಲಿ ವಿತರಣೆ ಅಂತಿಮ ಹಂತದಲ್ಲಿದ್ದು, ಸುಮಾರು 100 ಫಲಾನುಭವಿಗಳ ದಾಖಲೆಗಳನ್ನು ತಹಶೀಲ್ದಾರ್ ಕಚೇರಿ ಮೂಲಕ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಉಳಿದ ಮನೆಗಳ ಹಂಚಿಕೆಗೆ ಫಲಾನುಭವಿಗಳಿಗೆ ಬ್ಯಾಂಕ್ ಸಾಲದ ವ್ಯವಸ್ಥೆ ಕಲ್ಪಿಸುವುದು ಪ್ರಮುಖ ವಿಚಾರವಾಗಿದ್ದು, ಈ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ದಾಖಲೆ ಪರಿಶೀಲನೆ, ಬ್ಯಾಂಕ್ ಸಾಲ ಹಾಗೂ ಇತರೆ ತಾಂತ್ರಿಕ ಪ್ರಕ್ರಿಯೆಗಳನ್ನು ವಿಳಂಬ ಮಾಡದೆ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.

ಬಡವರ ಸ್ವಂತ ಸೂರಿನ ಕನಸು ನನಸಾಗಬೇಕು ಎಂಬ ಆಶಯದೊಂದಿಗೆ ಈಶ್ವರಪ್ಪ ಮತ್ತು ಕಾಂತೇಶ್ ಅವರು ಆಶ್ರಯ ಮನೆಗಳ ಹಂಚಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಬಾಕಿ ಉಳಿದಿರುವ ಮನೆಗಳ ವಿತರಣೆಗೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮನೆ ಹಂಚಿಕೆ ವಿಚಾರದಲ್ಲಿ ಫಲಾನುಭವಿಗಳು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ನ್ಯಾಯಯುತವಾಗಿ ಮನೆ ದೊರೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಮಾಜಿ ಮೇಯರ್ ಸುವರ್ಣ ಶಂಕರ್, ಲಕ್ಷ್ಮೀ ಶಂಕರ ನಾಯಕ್, ಸದಸ್ಯರಾದ ಈ. ವಿಶ್ವಾಸ್, ಶಿವಾಜಿ, ಬಾಲು, ರಾಜು, ಸಿಟಿ ಕೋ-ಆಪರೇಟಿವ್ ಬ್ಯಾಂಕ್ನ ಮಾಜಿ ಅಧ್ಯಕ್ಷರಾದ ರಾಜು, ಪ್ರಮುಖರಾದ ಕೆಂಪಮ್ಮ, ಶಂಕರ ನಾಯಕ ಸೇರಿದಂತೆ ರಾಷ್ಟ್ರಭಕ್ತರ ಬಳಗದ ಸದಸ್ಯರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.