ಹೊಸನಗರ; ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಡು ಬಡವರ ಕುಟುಂಬಗಳನ್ನು ಗುರುತಿಸಿ ಪಂಚಾಯತಿ ವತಿಯಿಂದ ಕೂಡಲೇ ಉಚಿತ ಆಹಾರ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಶಾಸಕ ಹರತಾಳು ಹಾಲಪ್ಪ ಮುಖ್ಯಾಧಿಕಾರಿಗೆ ಸೂಚಿಸಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ ಅಧ್ಯಕ್ಷೆಯಲ್ಲಿ ಗುರುವಾರ ನಡೆದ ತುರ್ತು ಸಭೆಗೆ ಶಾಸಕರು ದಿಢೀರ್ ಭೇಟಿ ನೀಡಿ ಎಲ್ಲಾ 11 ವಾರ್ಡ್‌ನಲ್ಲಿನ ಅರ್ಹ ಬಡ ಕುಟುಂಬಗಳನ್ನು ಪಕ್ಷಾತೀತವಾಗಿ ಗುರುತಿಸಿ ಶೀಘ್ರವಾಗಿ ಆಹಾರದ ಕಿಟ್ ವಿತರಿಸುವ ಕಾರ್ಯ ಆಗಬೇಕಿದೆ. ಇದಕ್ಕಾಗಿ ವರ್ಗ-1 ರಿಂದ ರೂ 4 ಲಕ್ಷ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಜೊತೆ ಪೋನ್ ಮೂಲಕ ಚರ್ಚಿಸಿದರು. ಸುಮಾರು 700ಆಹಾರದ ಕಿಟ್ ತಯಾರಿಸಿ ಪ್ರತಿ ವಾರ್ಡ್‌ಗೆ ಕನಿಷ್ಟ 50 ಕಿಟ್‌ಗಳಿಗೆ ಕಮ್ಮಿ ಇಲ್ಲದಂತೆ ಹಂಚುವಂತೆ, ಈ ಕಾರ್ಯದಲ್ಲಿ ಎಲ್ಲೂ ಲೋಪ ಎಸಗಬಾರದು ಎಂಬ ಎಚ್ಚರಿಕೆ ನೀಡಿದರು. ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಯ ಕಂಡು ಬಂದಿರುವಹಿನ್ನಲೆ, ಈ ಸಂಬಂಧ ಹೊಸ ಯೋಜನೆಗಾಗಿ ಸರ್ಕಾರಕ್ಕೆ ರೂ 30 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೆ ಡಿಪಿಆರ್‌ಗೆ ಅನುಮೋದನೆ ದೊರೆಯಲಿದೆ. ಮಳೆಗಾಲ ಸಮೀಪಿಸುತ್ತಿರುವ ಕಾರಣ ಪ್ರತಿವರ್ಷದಂತೆ ಜಾಕ್‌ವೆಲ್ ಹೂಳು ಎತ್ತಿ, ತಾತ್ಕಾಲಿಕ ಒಡ್ಡು ನಿರ್ಮಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಸದಸ್ಯರಾದ ಸುರೇಂದ್ರ ಕೋಟ್ಯಾನ್, ಗುರುರಾಜ್, ಚಂದ್ರಕಲಾ, ಸಿಂಥಿಯಾ ಶೆರಾವೋ, ಹೆಚ್.ಎಲ್.ಉಮೇಶ್, ಶಾಹಿನಾ, ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗು ಸಿಬ್ಬಂದಿಗಳು ಹಾಜರಿದ್ದರು.