ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ 130 ಶಿಕ್ಷಕರ ಅವಲಂಬಿತರಿಗೆ ಅನುಕಂಪ ಆಧಾರದಲ್ಲಿ ಹುದ್ದೆಗೆ ನೇಮಕಾತಿ ಪತ್ರಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಗುರುವಾರ ವಿತರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆದೇಶ ಪತ್ರಗಳನ್ನು ನೀಡಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಶಿಕ್ಷಣ ಪರಿವಾರದ ಅನೇಕ ಮಂದಿ ಮೃತಪಟ್ಟಿದ್ದಾರೆ. ಇದರಿಂದ ಅಪಾರ ನಷ್ಟವಾಗಿದೆ. ಮೃತ ಶಿಕ್ಷಕರ ಕುಟುಂಬಗಳಷ್ಟೇ ಅಲ್ಲದೆ, ನಾಡಿನ ಶಾಲಾ ಮಕ್ಕಳೂ ತಮ್ಮ ನೆಚ್ಚಿನ ಹಾಗೂ ಮೆಚ್ಚಿನ ಶಿಕ್ಷಕರನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. ಇಂಥ ಸಂದರ್ಭದಲ್ಲಿ ಶಿಕ್ಷಕರ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸುವ ಸಲುವಾಗಿ ಅನುಕಂಪದ ನೇಮಕಾತಿ ನೀಡಲು ಇಲಾಖೆ ಮುಂದಾಗಿದೆ’ ಎಂದರು.
’ದುಡಿಯುವ ಕೈಗಳನ್ನು ಕಳೆದುಕೊಂಡು ನೋವಿನಲ್ಲಿ ಮುಳುಗಿರುವ ಕುಟುಂಬಗಳಿಗೆ ಈ ನೇಮಕಾತಿ ಆದೇಶಗಳು ಆಸರೆ ಆಗಲಿದೆ. ಸಂಕಷ್ಟದ ಸಮಯದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಮೃತ ಶಿಕ್ಷಕರ ಕುಟುಂಬಗಳ ನೆರವಿಗೆ ಮುಂದಾಗುವುದು ನಮ್ಮ ಪ್ರಾಥಮಿಕ ಜವಾಬ್ದಾರಿ’ ಎಂದು ಹೇಳಿದರು.