ಸಾಗರ : ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀ ಮಹಾಗಣಪತಿ ರಥೋತ್ಸವವು ಸುಮುಹೂರ್ತದಲ್ಲಿ ನಡೆಯಿತು. ಸರ್ಕಾರದ ಕೋವಿಡ್ ನಿಯಮಾವಳಿಯನ್ನು ಅನುಸರಿಸಿ ರಥೋತ್ಸವ ನಡೆಸಲು ತಾಲ್ಲೂಕು ಆಡಳಿತ ಅನುಮತಿ ನೀಡಿದ್ದರಿಂದ ರಥೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ರಥದ ಮನೆಯಿಂದ ಕೇವಲ 10 ಮೀಟರ್‌ವರೆಗೆ ಮಾತ್ರ ರಥವನ್ನು ಎಳೆಯಲಾಯಿತು. ಭಕ್ತಾದಿಗಳಿಗೆ ಪ್ರವೇಶ ನಿರಾಕರಿಸಿದ್ದರೂ ನಿರೀಕ್ಷೆ ಮೀರಿ ಭಕ್ತರು ಗಣಪತಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಜನರು ಗುಂಪುಗೂಡುವುದನ್ನು ತಡೆಗಟ್ಟಲು ರಥೋತ್ಸವ ನಡೆಯುವ ಸುತ್ತಮುತ್ತಲಿನ ಪ್ರದೇಶಕ್ಕೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಮಂಗಳರಾತಿ, ವಿಶೇಷ ಪೂಜೆ ಹಾಗೂ ಹಣ್ಣುಕಾಯಿ ಒಡೆಯುವುದನ್ನು ನಿಷೇದ ಮಾಡಿದ್ದರೂ ಭಕ್ತರು ಸಂಪ್ರದಾಯದಂತೆ ತಾವೇ ಹಣ್ಣುಕಾಯಿ ಮಾಡಿಕೊಂಡು ಗಣಪತಿ ದರ್ಶನ ಮಾಡಿ ತೆರಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಚ್.ಹಾಲಪ್ಪ ಹರತಾಳು, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಟಿ.ಡಿ.ಮೇಘರಾಜ್, ಬಿ.ಎಚ್.ಲಿಂಗರಾಜ್, ಅರವಿಂದ ರಾಯ್ಕರ್, ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್., ಡಿವೈಎಸ್‌ಪಿ ವಿನಾಯಕ ಎನ್. ಶೆಟಿಗೇರ್, ಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ.ಹೆಗಡೆ ಇನ್ನಿತರರು ಪಾಲ್ಗೊಂಡಿದ್ದರು.