
ಶಿವಮೊಗ್ಗ, ಏ.೧೧:
ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂಸ್ಕಾರವನ್ನು ಹೊಂದಿದ ಭಾರತ. ದೇಶದಲ್ಲಿ ಕುಟುಂಬ ವ್ಯವಸ್ಥೆ ಜೀವಂತವಾಗಿ ಉಳಿಯಲು ಕಾರಣ ನಮ್ಮ ನಡುವಿನ ಧರ್ಮಗಳು ಹಾಗೂ ಆಚಾರ, ವಿಚಾರಗಳು ಕಾರಣ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ಅವರಿಂದು ಬೆಳಿಗ್ಗೆ ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ೫೦ ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಹಿರಿಯ ದಂಪತಿಗಳ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು, ನಮ್ಮ ನಡುವಿನ ವ್ಯವಸ್ಥೆಗಳು, ನಮ್ಮ ಧರ್ಮ, ನಮ್ಮ ಆಚಾರ,ವಿಚಾರಗಳು ಅನ್ಯ ದೇಶಗಳಿಗೆ ಮಾಡರಿ, ನಮ್ಮ ಇತ್ತೀಚಿನ ಆಚಾರ ವಿಚಾರಗಳನ್ನು ಮರೆಯುತ್ತಿರುವುದು ದುರಂತದ ಸಂಗತಿ. ಗುರು ಹಿರಿಯರನ್ನು ಪೂಜ್ಯ ತಂದೆ-ತಾಯಿಯರನ್ನು ನಾವು ಪ್ರೀತಿಯಿಂದ ಕಾಣುವುದು, ಆರಾಧಿಸುವುದು, ಆರೈಕೆ ಮಾಡುವುದು ಅತ್ಯಂತ ಅಗತ್ಯ. ಏಕೆಂದರೆ ಮುಂದೆ ನೀವು ಸಹ ವಯಸ್ಸಾದವರಾಗುತ್ತೀರಿ ಎಂಬ ಕಾಳಜಿ ಹಾಗೂ ಕಳಕಳಿ ನಿಮಗಿರಲಿ ಎಂದರು.

ಇತ್ತೀಚಿನ ದಿನಮಾನಗಳಲ್ಲಿ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಆರೋಪವನ್ನು ಕೇಳುತ್ತಿದ್ದೇವೆ. ಇಲ್ಲಿ ಗಂಡು ಹೆಣ್ಣಿನ ಮಧ್ಯದ ಅಂತರ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬದಲಾಗದಿದ್ದರೂ ಸಹ, ಹೊಂದಾಣಿಕೆ ಮನೋಭಾವ ಹಾಗೂ ಅತ್ಯಧಿಕ ದುರಾಸೆಯ ಮನಸ್ಸು ಇಂತಹ ಕ್ಲಿಷ್ಟತೆ ತರಲು ಕಾರಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಪ್ರತಿ ವರ್ಷ ಇದೇ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಿಂದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಏರ್ಪಡಿಸುತ್ತಿತ್ತು, ಆದರೆ ಇತ್ತೀಚಿನ ಮದುವೆಗಳು ಹೈ ಫೈ ಕಲ್ಯಾಣ ಮಂದಿರಗಳನ್ನು ಕುಡುಕುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುವುದು ಉಚಿತ ಸಾಮೂಹಿಕ ವಿವಾಹದ ಸರಳ ಸಮಾರಂಭಕ್ಕೆ ಅಡ್ಡಿಯಾಗಿದೆ. ಎಂದಿನಂತೆ ಮುಂದಿನ ಬಾರಿ ಇದು ನಡೆಯುವುದಾಗಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿರುವುದು ಸಂತೋಷದ ವಿಷಯ. ಇಲ್ಲಿ ೫೦ ವರ್ಷ ತುಂಬಿದ ದಂಪತಿಗಳನ್ನು ಮುಂದಿಟ್ಟುಕೊಂಡು, ಹೊಸ ದಾಂಪತ್ಯ ಜೀವನಕ್ಕೆ ಕಾಲಿರಿಸುವವರನ್ನು ಸೇರಿಸುವ ಉದ್ದೇಶವೆಂದರೆ ಬದುಕಿದರೆ ಹೀಗೆ ಸಾರ್ಥಕ ವರ್ಷಗಳನ್ನು ಕಳೆಯಬೇಕು ಎಂಬುದನ್ನು ನೆನಪಿಸುವ ಮಹತ್ತರ ಅಂಶವನ್ನು ಹೊಂದಿದೆ ಎಂದರು.

ಇತ್ತೀಚಿನ ದಿನಮಾನಗಳಲ್ಲಿ ನಾವು ತಿನ್ನುತ್ತಿರುವ ರಾಸಾಯನಿಕ ಗೊಬ್ಬರಗಳ ಕೆಮಿಕಲ್ ನಮ್ಮ ದೇಹವನ್ನು,ದೇಹದ ಅಂಗಾಂಶಗಳನ್ನು ಹಾಳುಮಾಡುತ್ತದೆ,ಅದಕ್ಕಾಗಿ ನಾವು ಆಯುರ್ವೇದದ ಮೊರೆ ಹೋಗುತ್ತೇವೆ. ಮುಖದ ಮೇಲೆ ಕೊಳೆ ಹತ್ತಿದರೆ ಸೋಪು ಹಚ್ಚಿ ತೊಳೆದುಕೊಳ್ಳುತ್ತೇವೆ ಆದರೆ ಮನಸ್ಸಿನ ಕೊಳೆ ತೊಳೆಯುವ ಕಾರ್ಯ ಇದರೊಂದಿಗೆ ನಡೆಯಬೇಕು. ಇದಕ್ಕೆ ಧರ್ಮ ಹಾಗೂ ಮಠಗಳು ಒಂದು ಪ್ರೇರಣೆಯಾಗುತ್ತದೆ ಎಂದರು.
ಶಿವಮೊಗ್ಗ ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡುತ್ತಾ, ಆದಿಚುಂಚನಗಿರಿ ಶ್ರೀಗಳು ಹಿಂದೂ ಸಂಸ್ಕೃತಿಗೆ ಶಕ್ತಿ ಕೊಡುವಂತಹ ಕಾರ್ಯ ಮಾಡುತ್ತಿದ್ದಾರೆ.ಹಿಂದಿನಿಂದಲೂ ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದ ಶ್ರೀಮಠವು, ಈಗ ದೇಶ – ವಿದೇಶಗಳಲ್ಲಿ ನಮ್ಮ ಆಚಾರ, ವಿಚಾರಗಳನ್ನು,ಸಂಸ್ಕೃತಿ ಹಾಗೂ ಸಂಸ್ಕಾರವನ್ನು ನೀಡುತ್ತಿದ್ದಾರೆ. ಹಾಗಾಗಿ ಶ್ರೀಮಠವು ಎಲ್ಲರ ಗೌರವಕ್ಕೆ ಪಾತ್ರವಾಗುತ್ತದೆ ಎಂದರು.

ಮಾಜಿ ನಗರಸಭಾ ಅಧ್ಯಕ್ಷ ಹಾಗೂ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗಡೆ ಮಾತನಾಡಿ, ಶ್ರೀಗಳು ಈಗಿನ ವ್ಯವಸ್ಥೆಯಲ್ಲಿ ಮಲೆನಾಡಿನ ಭೂಮಿಯ ಉಳಿವಿಗಾಗಿ ರೈತನ ಬದುಕು ಹಸಿರು ಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಮಾತನಾಡಿ, ನೆಮ್ಮದಿ ಬದುಕನ್ನು ರೈತನಿಗೆ ಕೊಡಿಸುವ ಕಾರ್ಯ ಮಾಡಲಿ ಎಂದರು.ಶ್ರೀ ಆದಿಚುಂಚನಗಿರಿ ಹಿಂದಿನ ವಿದ್ಯಾರ್ಥಿ ಹಾಗೂ ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ,ಉಮಾಪತಿ ಶ್ರೀನಿವಾಸ್ ಮಾತನಾಡಿ, ನನಗೆ ತಂದೆ ತಾಯಿ ರಕ್ತವನ್ನು ಹೇಗೆ ಕೊಟ್ಟು ಬೆಳೆಸಿದರು ಹಾಗೆಯೇ ಆದಿಚುಂಚನಗಿರಿ ಶಿವಮೊಗ್ಗ ಮಠದ ಶ್ರೀಗಳಾದ ಪ್ರಸನ್ನನಾಥ ಸ್ವಾಮೀಜಿ ಅವರು ನನಗೆ ಅನ್ನದಾನದ ಜೊತೆ ಶಿಕ್ಷಣ ದಾನದ ಮಾಡಿದ ಹಿನ್ನೆಲೆಯಲ್ಲಿ,ನಾನು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ ಎಂದು ಶ್ರೀ ಗಳಿಗೆ ಹಾಗೂ ಮಠಕ್ಕೆ ಅಭಿನಂದಿಸಿದರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಶಾಖಾಮಠದ ಶ್ರೀ ಸಾಯಿನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿಗೌಡ ಉಪಸ್ಥಿತರಿದ್ದರು. ಸಂಗೀತ ಶಿಕ್ಷಕ ಅಂದ ಕಲಾವಿದ ಶರಣಪ್ಪ ಅವರ ಅತ್ಯದ್ಭುತ ಪ್ರಾರ್ಥನಾ ಗಾಯನದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಭದ್ರಾವತಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಜಗದೀಶ್ ಸ್ವಾಗತಿಸಿದರು. ಶಿಕ್ಷಕಿ ಸುಜಾತಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಮ್ಮ ಭಾರತಕ್ಕೆ ತನ್ನದೇ ಆದ ಭವ್ಯ ಆಧ್ಯಾತ್ಮಿಕ ಶಕ್ತಿ ಇದೆ. ವಿಶ್ವದಲ್ಲೇ ತಲೆಯೆತ್ತಿ ನಡೆಯುವಂತಹ ದೇಶ ನಮ್ಮದಾಗಲು ಕಾರಣ ನಮ್ಮ ಧರ್ಮ ಹಾಗೂ ನಮ್ಮ ಸಂಸ್ಕೃತಿ ಎಂದರೆ ತಪ್ಪಾಗಲಿಕ್ಕಿಲ್ಲ ಶ್ರೀ ಆದಿಚುಂಚನಗಿರಿ ಶ್ರೀಗಳು ಆರಂಭದಿಂದಲೂ ಎಲ್ಲರ ಪಾಲಿಗೂ ಶಕ್ತಿ ನೀಡುವ ಮಠವಾಗಿದೆ.
ಬಿ.ವೈ. ರಾಘವೇಂದ್ರ, ಸಂಸದ