ಶಿವಮೊಗ್ಗ : ಮಹಿಳೆಯರು ಹೆಚ್ಚು ಸಂಘಟಿತರಾಗಿ ಪಕ್ಷವನ್ನು ಬಲಪಡಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾದ ಗೀತಾ ಸತೀಶ್ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿಂದು ಸಂಭ್ರಮದ ವಾತಾವರಣ ಮೂಡಿದೆ. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪಕ್ಷಕ್ಕೆ ಬಲ ತುಂಬಿದ್ದಾರೆ. ಪ್ರತಿ ಮನೆ ಮನೆಗೂ ಹೋಗಿ ಪಕ್ಷದ ಸಂಘಟನೆ ಮಾಡಬೇಕು. ನಮ್ಮೊಳಗೆ ಏನೇ ಭಿನ್ನಾಭಿಪ್ರಾಯವಿರಲಿ, ನಾಲ್ಕು ಗೋಡೆಯ ಮಧ್ಯೆ ಅದನ್ನು ಬಗೆಹರಿಸಿಕೊಳ್ಳಬೇಕು. ಮುಂದೆ ಮಹಾನಗರಪಾಲಿಕೆ, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಬರಲಿದ್ದು, ಮಹಿಳಾ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಿ ಜನಪರ ಕೆಲಸ ಮಾಡಬೇಕು. ಅದಕ್ಕೆ ಮಹಿಳೆಯರಿಗೆ ಹೆಚ್ಚಿನ ಶಕ್ತಿ ಬರಲಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿ ಕೆಲಸ ಮಾಡೋಣ ಎಂದರು.

ರಾಜ್ಯ ಮಹಿಳಾ ನಾಯಕರಾದ ರಶ್ಮೀರಾಮೇಗೌಡ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಮೇದಿನಿಯವರು ಮಹಿಳಾ ಕಾರ್ಯಕರ್ತೆಯರಿಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಗಣ್ಯರು ಸೇರಿ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಮರು ಆಯ್ಕೆಯಾದ ಜಿಲ್ಲಾ ಮಹಿಳಾ ಅಧ್ಯಕ್ಷ ಗೀತಾಸತೀಶ್ ಅವರನ್ನು ಅಭಿನಂದಿಸಲಾಯಿತು. ಅದಕ್ಕೂ ಮುನ್ನ ಪಟಾಕಿ ಸಿಡಿಸಿ , ಸಿಹಿಹಂಚಿ ಮಹಿಳಾ ಕಾರ್ಯಕರ್ತೆಯರು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಾಮಕೃಷ್ಣ, ಮಾಜಿ ಅಧ್ಯಕ್ಷ ಕಡಿದಾಳ್ ಗೋಪಾಲ್, ನಗರಾಧ್ಯಕ್ಷ ದೀಪಕ್ಸಿಂಗ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ನರಸಿಂಹ ಗಂಧದಮನೆ, ದಾದಾಪೀರ್, ಗ್ರಾಮಾಂತರ ಯುವ ಅಧ್ಯಕ್ಷ ಮಧು, ತ್ಯಾಗರಾಜ್, ಹೆಚ್.ಎಂ.ಸಂಗಯ್ಯ ಸೇರಿದಂತೆ ಜೆಡಿಎಸ್ ಪದಾಧಿಕಾರಿಗಳು ಮತ್ತು ಮಹಿಳಾ ಮುಖಂಡರು ಉಪಸ್ಥಿತರಿದ್ದರು.