ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪ ಎತ್ತುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಎತ್ತುಗಳೊಂದಿಗೆ ಸಾಗುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಗೆಣಸಿ ಎತ್ತುಗಳ ಸಂತೆಯಲ್ಲಿ ಖರೀದಿಸಿದ ಹೋರಿಗಳನ್ನು ಚಿತ್ರದುರ್ಗ ಮಾರ್ಗವಾಗಿ ಹಾವೇರಿ ಜಿಲ್ಲೆಯ ತುಮ್ಮಿನಕಟ್ಟೆ ಭಾಗಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ವಿಷಯದ ಮಾಹಿತಿ ಪಡೆದ ಚನ್ನಗಿರಿ ಭಾಗದ ಭಜರಂಗ ದಳದ ಕಾರ್ಯಕರ್ತರು ಎತ್ತುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಹಿಂಬಾಲಿಸಿ ಹೊಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಹೊಳೆಹೊನ್ನೂರು ಪೊಲೀಸರು ಹೊಸ ಹೈವೇ ರಸ್ತೆಯಲ್ಲಿ ಎತ್ತುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ತಡೆದು ವಶಕ್ಕೆ ಪಡೆದುಕೊಂಡರು. ಬಳಿಕ ಲಾರಿಯಲ್ಲಿ ಇದ್ದ ಎಲ್ಲಾ ಎತ್ತುಗಳನ್ನು ಶಿವಮೊಗ್ಗದ ಗೋಶಾಲೆಗೆ ಕಳುಹಿಸಿ ಸುರಕ್ಷಿತವಾಗಿ ಬಿಡಲಾಗಿದೆ.
ಇದರಲ್ಲಿ ಭಾಗಿಯಾದವರು ವಿವಿಧ ಸಂತೆಯಲ್ಲಿ ಎತ್ತುಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯಾಪಾರಸ್ಥರು ಎನ್ನಲಾಗಿದೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.