ಶಿವಮೊಗ್ಗ : ಜಿಲ್ಲೆಯಲ್ಲಿ ಅಡುಗೆ ಅನಿಲದ ಗಂಭೀರ ಸಮಸ್ಯೆ ಇಲ್ಲ, ಅಡುಗೆ ಅನಿಲ ಮತ್ತು ಕುಡಿಯುವ ನೀರಿನ ಬಗ್ಗೆ ಇಂದು ಮಧ್ಯಾಹ್ನ ಜಿಲ್ಲಾಡಳಿತದೊಂದಿಗೆ ವಿಶೇಷ ಸಭೆ ಕರೆದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಬೇಸಿಗೆ ಜೋರಾಗಿದೆ. ನೀರಿನ ಸಮಸ್ಯೆ ಕೆಲವೆಡೆ ಬರಬಹುದು. ಅದಕ್ಕಾಗಿ ಅಧಿಕಾರಿಗಳೊಂದಿಗೆ ವಿಸ್ತಾರವಾಗಿ ಚರ್ಚೆ ಮಾಡಲಿದ್ದೇನೆ ಎಂದರು.
ಯತೀಂದ್ರ ಸಿದ್ದರಾಮಯ್ಯನವರು ಮುಂದಿನ ಉಸ್ತುವಾರಿ ಎಂದು ಸಿಎಂ ಹೇಳಿದ್ದಾರೆ ಎಂಬ ಪ್ರಶ್ನೆಗೆ ಆ ವಿಚಾರ ನನಗೆ ಗೊತ್ತಿಲ್ಲ ಎಂದರು. ಕಾಂಗ್ರೆಸ್ ಪಕ್ಷದವರೇ ಬಜೆಟ್ಟನ್ನು ವಿರೋಧಿಸುತ್ತಿದ್ದಾರೆ. ಶಾಸಕ ಇಕ್ಬಾಲ್ ಅವರು ಅಪಸ್ವರ ಎತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಅದು ಸ್ವಭಾವಿಕ. ಅವರ ಕ್ಷೇತ್ರದ ಬೇಡಿಕೆಗೆ ಸ್ಪಂದಿಸದಿದ್ದಾಗ ಹೇಳಿದ್ದಾರೆ. ಅದು ಸರಿಯಾಗುತ್ತೆ ಎಂದರು.

ನನ್ನ ಜಿಲ್ಲೆಗೂ ಅನೇಕ ಬೇಡಿಕೆಗಳು ಬಾಕಿಯಿದೆ. ಅದನ್ನು ಸಪ್ಲಿಮೆಂಟರಿಯಾಗಿ ಬಿಡುಗಡೆಯಾಗುತ್ತದೆ. ಹಿಂದೆ ಕೂಡ ಮಾಡಿದ್ದಾರೆ. ಶರಾವತಿ ಸಂತ್ರಸ್ಥರ ಬೇಡಿಕೆಗಳ ಈಡೇರಿಕೆ ಕೂಡ ಪ್ರಮುಖ ವಿಷಯವಾಗಿದೆ. ಸರ್ಕಾರಿ ಶಾಲೆ ಮತ್ತು ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಬಿಜೆಪಿ ಕಾಲದಲ್ಲಿ ಮುಚ್ಚಿದ್ದಾರೆ. ಆದರೆ ಅದು ನನಗೆ ಬೇಡ. ಕನ್ನಡ ಮೀಡಿಯಂ ಅನುದಾನಕ್ಕೆ ಒಳಪಡಿಸಬೇಕು ಮತ್ತು ಶಿಕ್ಷಕರಿಗೆ ಅನುದಾನಿತ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಬೇಕು ಎಂಬ ಬೇಡಿಕೆ ಇದೆ. ಅದೊಂದು ಬಾಕಿ ಇರುವುದು. ಅದಕ್ಕೂ ಕೂಡ ಕನ್ನಡ ಪ್ರಾಧಿಕಾರದ ಅಧ್ಯಕ್ಷರು ಮತ್ತು ಇನ್ನಿತರ ಗಣ್ಯರ ಜೊತೆ ಚರ್ಚೆ ನಡೆಸಿ, ಒತ್ತಡತರುವ ಕೆಲಸ ಮಾಡಿದ್ದೇವೆ. ಅದು ಕೂಡ ಶೀಘ್ರದಲ್ಲೇ ಬಗೆಹರಿಯುತ್ತದೆ. ಕನ್ನಡ ಮೀಡಿಯಂ ಬಿಡುವ ಪ್ರಶ್ನೆಯೇ ಇಲ್ಲ. ಆರ್ಥಿಕ ಇಲಾಖೆ ನನ್ನ ಕೈಯಲ್ಲಿಲ್ಲ ಆದರೂ ಸಿಎಂ ಗಮನಕ್ಕೆ ತಂದಿದ್ದೇನೆ ಎಂದರು.
ನೈಟ್ಲ್ಯಾಂಡಿಂಗ್ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ. ಕಾಮಗಾರಿ ಪ್ರಾರಂಭವಾಗಿದೆ. ಆರು ತಿಂಗಳೊಳಗೆ ಕೆಲಸ ಮುಗಿಸುವ ಭರವಸೆ ನೀಡಿದ್ದಾರೆ ಎಂದರು. ಕೆಪಿಎಸ್ ಶಾಲೆಗಳ ಉದ್ಘಾಟನಾ ಸಮಾರಂಭ ಶಿವಮೊಗ್ಗದಿಂದಲೇ ನಡೆಯಬೇಕಿತ್ತು. ಈಗ ಅಧಿವೇಶನ ನಡೆಯುತ್ತಿರುವುದರಿಂದ ಏಪ್ರಿಲ್ ಅಂತ್ಯಕ್ಕೆ ಸಿಎಂ ಶಿವಮೊಗ್ಗದಿಂದಲೇ ಉದ್ಘಾಟಿಸಲಿದ್ದಾರೆ ಎಂದರು.

ಇದಕ್ಕಾಗಿಯೇ ೩೫೦೦ ಕೋಟಿಯನ್ನು ಮೀಸಲಿಟ್ಟಿದ್ದು, ಅಲ್ಪಸಂಖ್ಯಾತರ ಖೋಟಾ ಸೇರಿದರೆ ಸುಮಾರು ೧೦೦೦ ಕೆಪಿಎಸ್ ಶಾಲೆಗಳು ಪ್ರಾರಂಭವಾಗಲಿದೆ ಎಂದರು.
ದಾವಣಗೆರೆ ಉಪ ಚುನಾವಣೆಯನ್ನು ನಾವೇ ಗೆಲ್ಲುತ್ತೇವೆ. ಈಗಾಗಲೇ ಉಸ್ತುವಾರಿಗಳ ಆಯ್ಕೆ ನಡೆದು, ಸಭೆಯೂ ಆಗಿದೆ. ಯಾವುದೇ ಗೊಂದಲವಿಲ್ಲ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧ. ೨೫ಜನ ಶಾಸಕರು ಸಭೆ ನಡೆಸಿದ್ದು ತಪ್ಪಪ್ಪ, ಎಲ್ಲರಿಗೂ ಹಕ್ಕಿದೆ. ಅವರು ಪಕ್ಷಕ್ಕೆ ತಿಳಿಸಿಯೇ ಸಭೆ ನಡೆಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕಿ ಬಲ್ಕೀಶ್ಭಾನು ಇದ್ದರು.