
ಶಿವಮೊಗ್ಗ,ಮಾ.27: ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಆಧಾರಿತ ಪಕ್ಷವಾಗಿದ್ದು, ಈ ಪಕ್ಷದಲ್ಲಿ ಎಷ್ಟೇ ದೊಡ್ಡ ನಾಯಕರಿದ್ದರೂ ಅವರ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಶಾಸಕ ಚನ್ನಬಸಪ್ಪ ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, 6ವರ್ಷಗಳ ಕಾಲ ಬಿಜೆಪಿ ಹಿರಿಯ ನಾಯಕ ಯತ್ನಾಳ್ ಅವರ ಉಚ್ಛಾಟನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಪಕ್ಷದ ಶಿಸ್ತು ಉಲ್ಲಂಘನೆ ಯಾರೂ ಮಾಡಬಾರದು. ಉಮಾಭಾರತಿಯಂತಹ ದೊಡ್ಡ ದೊಡ್ಡ ನಾಯಕರನ್ನು ಕೂಡ ಅಶಿಸ್ತು ತೋರಿದಾಗ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಹಿಂದೇ ಕೂಡ ಯತ್ನಾಳ್ ಅವರನ್ನು ಎರಡು ಬಾರಿ ಉಚ್ಛಾಟಿಸಿದ್ದರು. ಈಗ ಇದು 3ನೇ ಭಾರಿಯಾಗಿದೆ. ನಾಳೆ ಚನ್ನಬಸಪ್ಪ ಕೂಡ ಪಕ್ಷದ ವಿರುದ್ಧ ಹೇಳಿಕೆ ನೀಡಿದರೆ, ಅಶಿಸ್ತು ತೋರಿದರೆ ಅವರನ್ನು ಕೂಡ ಉಚ್ಛಾಟನೆ ಮಾಡಲಾಗುತ್ತದೆ.

ಎಲ್ಲರೂ ಪಕ್ಷದ ಶಿಸ್ತನ್ನು ಪಾಲಿಸಬೇಕು. ಇಲ್ಲಿ ಯಾರೂ ಕೂಡ ದೊಡ್ಡವರಲ್ಲ ಮೊದಲು ದೇಶ, ಬಳಿಕ ಪಕ್ಷ ಎಂಬುವುದು ನಮ್ಮ ಪಕ್ಷದ ಸಿದ್ಧಾಂತ. ಸಿದ್ಧಾಂತ ಬಿಟ್ಟು ಯಾವ ಕಾರ್ಯಕರ್ತ ಕೂಡ ಹೋಗುವುದಿಲ್ಲ ಎಂದರು.

ಪಂಚಮಶಾಲಿ ಶ್ರೀಗಳಾದ ಮೃತ್ಯುಂಜಯ ಸ್ವಾಮಿಗಳು ಬಿಜೆಪಿಯ ನಾಯಕರ ಬಗ್ಗೆ ಕಿಡಿಕಾರಿದ್ದು ಇವತ್ತು ಬಿಜಾಪುರದಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಮುಂದೆ ಬಿಜೆಪಿಗೆ 36 ಸೀಟುಗಳು ಬರುವುದಿಲ್ಲ ಎಂದಿದ್ದಾರೆ. ಬಿಜೆಪಿಗೆ ಹಿನ್ನಡೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಗೆ ಸೀಟುಗಳು ಮುಖ್ಯವಲ್ಲ ಸೊನ್ನೆಯಿಂದಲೇ ಪ್ರಾರಂಭವಾದ ಪಕ್ಷ ನಮ್ಮದು. ಮುಂದೆ ಸೊನ್ನೆ ಬಂದರು ಮತ್ತೆ ನಾವು ಅಧಿಕಾರ ಹಿಡಿಯುತ್ತೇವೆ. ಈ ಬಗ್ಗೆ ಸಂಶಯ ಬೇಡ. ಸಹಜವಾಗಿ ಕೆಲವರು ಯತ್ನಾಳ್ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಾರೆ. ಹೋರಾಟವನ್ನು ಮಾಡಬಹುದು. ಅವರಿಗೆ ಪಕ್ಷದ ಸಿದ್ಧಾಂತದ ಬಗ್ಗೆ ಕ್ಲಾರಿಟಿ ಇಲ್ಲ. ಪಕ್ಷದ ಶಿಸ್ತು ಅವರಿಗೆ ಅರ್ಥವಾಗುವುದಿಲ್ಲ. ಯಾವ ಕಾರ್ಯಕರ್ತ ಕೂಡ ಎದೆಹೊಡೆದುಕೊಳ್ಳುವುದು ಬೇಡ. ಪಕ್ಷಕ್ಕೆ ಏನೂ ಡ್ಯಾಮೇಜ್ ಆಗುವುದಿಲ್ಲ ಎಂದರು.

ಹಿಂದೆ ಕೂಡ ಈ ರೀತಿ ಅನೇಕ ಘಟನೆಗಳು ನಡೆದಿವೆ. ಪಕ್ಷ ಇನ್ನೂ ಬಲವಾಗಿ ಬೆಳೆದಿದೆ. ಇಲ್ಲಿ ಎಲ್ಲರೂ ವ್ಯಕ್ತಿಗತವಾಗಿ ಯಾರು ಯೋಚನೆ ಮಾಡಲ್ಲ. ಸಿದ್ಧಾಂತಕ್ಕೋಸ್ಕರ ದೇಶಕ್ಕಾಗಿ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಯಾರೂ ಧೃತಿಗೆಡುವುದು ಬೇಡ. ಸ್ವಾಮೀಜಿಗಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು,