
ಶಿವಮೊಗ್ಗ,ಮಾ.೨೬: ಭಾರತದ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿ ಮಾಡುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹುದೊಡ್ಡದು ಎಂದು ಎಂಎಡಿಬಿ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ ಹೇಳಿದರು.
ಅವರು ಇಂದು ಕುವೆಂಪು ವಿವಿ ಸಹ್ಯಾದ್ರಿ ಕಲಾ ಕಾಲೇಜು, ಇತಿಹಾಸ ವಿಭಾಗ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಸಹಕಾರ ಮತ್ತು ಯುವಜನತೆ ಕುರಿತು ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಭಾರತದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಈ ಸಹಕಾರ ಚಳುವಳಿಯು ಭಾರತದಲ್ಲಿ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಯೂರೋಪಿನ ರಾಷ್ಟ್ರಗಳಲ್ಲಿ ಬಂಡವಾಳಶಾಹಿಗಳ ವಿರುದ್ಧ ಹುಟ್ಟಿಕೊಂಡ ಅಸಹಕಾರ ಚಳುವಳಿಯು ಸಹಕಾರ ಚಳುವಳಿಯಾಗಿ ಮಾರ್ಪಟ್ಟಿದೆ. ಭಾರತ ವಿಶ್ವದಲ್ಲಿಯೇ ಅತಿದೊಡ್ಡ ಸಹಕಾರ ಕ್ಷೇತ್ರವಾಗಿದೆ. ಕಾರ್ಪೋರೇಟ್ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯಾಗಿ ಸಹಕಾರ ಕ್ಷೇತ್ರ ಬೆಳೆಯುತ್ತಿದೆ ಎಂದರು.

ರಾಜ್ಯದಲ್ಲಿ ಸುಮಾರು ೩೫ ಸಾವಿರಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳಿವೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಇದು ಸರ್ಕಾರದ ವ್ಯವಸ್ಥೆ ಅಲ್ಲ. ಸಾರ್ವಜನಿಕ ವ್ಯವಸ್ಥೆಯಾಗಿದೆ. ರಾಜ್ಯ ಸರ್ಕಾರದ ಬಜೆಟ್ಗಿಂತ ಸಹಕಾರಿ ಕ್ಷೇತ್ರದ ಬಜೆಟ್ ದೊಡ್ಡದಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು ಹೀಗೆ ಎಲ್ಲಾ ವರ್ಗದ ಜನರಿಗೆ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿದೆ. ಯಾವ ಕಾರ್ಪೋರೇಟ್ ಕಂಪನಿಗಳಿಗಿಂತ ಸಹಕಾರ ಕ್ಷೇತ್ರ ಕಡಿಮೆ ಇಲ್ಲ. ಕಾರ್ಪೋರೇಟ್ ಕಂಪನಿಗಳು ಸರ್ಕಾರವನ್ನೇ ಅಲ್ಲಾಡಿಸುವಷ್ಟು ಬೆಳೆದಿದೆ. ಆದರೆ ಸಹಕಾರ ಸಂಸ್ಥೆಗಳಿಗೆ ಅದನ್ನು ತಡೆಯುವ ಶಕ್ತಿ ಕೂಡ ಬಂದಿದೆ ಎಂದರು.

ವಿದ್ಯಾರ್ಥಿಗಳು ಸಹಕಾರ ಕ್ಷೇತ್ರದ ಬಗ್ಗೆ ಆಸಕ್ತಿವಹಿಸಬೇಕಾಗಿದೆ. ಇಲ್ಲಿ ಬೇಕಾದಷ್ಟು ಉದ್ಯೋಗಗಳು ಇವೆ. ಗ್ರಾಮೀಣ ಅಭಿವೃದ್ಧಿಯ ಕಲ್ಪನೆ ಇದೆ. ಗಾಂಧೀಜಿಯವರ ಸ್ವದೇಶಿ ಕಲ್ಪನೆಕೂಡ ಸಹಕಾರವಾಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಅದೇಕೋ ಸಹಕಾರ ಕ್ಷೇತ್ರಗಳ ಬಗ್ಗೆ ಅಷ್ಟೋಂದು ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ನೀವೆಲ್ಲರೂ ಸಹಕಾರ ಕ್ಷೇತ್ರಕ್ಕೆ ಬರಬೇಕು. ಪದವಿ ಪಡೆದವರು ನಮ್ಮಲ್ಲಿಗೆ ಬಂದರೆ ಸಾಲ ಕೂಡ ನೀಡುತ್ತೇವೆ. ಯಾರ ಅವಲಂಬನೆ ಇಲ್ಲದೆ ನಿಮ್ಮ ಆರ್ಥಿಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು ಎಂದು ಕರೆ ನೀಡಿದರು.
ರೈತರ ಹಿತಕ್ಕೆ ಡಿಸಿಸಿ ಬ್ಯಾಂಕ್ ಅತ್ಯಂತ ಸಹಕಾರ ನೀಡುತ್ತಾ ಬಂದಿದೆ. ಮೊದಲು ಕೇವಲ ಒಬ್ಬ ರೈತನಿಗೆ ೫ ಸಾವಿರ ರೂ. ಸಾಲ ನೀಡುತ್ತಿದ್ದ, ನಮ್ಮ ಬ್ಯಾಂಕ್ ಈಗ ೬೦ ಲಕ್ಷ ಕೊಡುವಷ್ಟು ಬೆಳೆದು ನಿಂತಿದೆ. ಅಷ್ಟೇ ಅಲ್ಲ, ಸ್ತ್ರೀ ಸ್ವಸಹಾಯ ಸಂಘಗಳನ್ನು ರಚಿಸಿ ೧೦ ಲಕ್ಷದವರೆಗೂ ಸಾಲ ನೀಡುತ್ತೇವೆ. ನಮ್ಮ ಬ್ಯಾಂಕ್ನಲ್ಲಿ ಸ್ತ್ರೀಶಕ್ತಿ ಸಂಘಗಳು ೧೦೦ಕ್ಕೆ ೧೦೦ರಷ್ಟು ಸಾಲವನ್ನು ಮರುಪಾವತಿಸಿವೆ.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಚಾರ ಸಂಕಿರಣದ ಸಂಚಾಲಕ ಡಾ.ಕೆ.ಎನ್.ಮಂಜುನಾಥ್, ಸಹಕಾರ ಕ್ಷೇತ್ರದ ಬಗ್ಗೆ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ರಾಜ್ಯಮಟ್ಟದ ಸಂಕಿರಣವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸಲಾಗಿದೆ.ಇಲ್ಲಿನ ಅನೇಕರು ಸಹಕಾರ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಸಾಲ ಪಡೆದು ತಮ್ಮದೇ ಆದ ಉದ್ಯಮಗಳನ್ನು ಕೂಡ ಆರಂಭಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಸೈಯ್ಯದ್ ಸನಾವುಲ್ಲಾ ಮಾತನಾಡಿ, ಜಿಲ್ಲಾ ಸಹಕಾರ ಇಲಾಖೆಯು ನಮ್ಮ ಕಾಲೇಜಿಗೆ ಬಂದು ವಿದ್ಯಾರ್ಥಿಗಳಿಗೆ ಸಹಕಾರ ಕ್ಷೇತ್ರದ ಮಹತ್ವವನ್ನು ಪರಿಚಯಿಸಿದ್ದಾರೆ. ಕುವೆಂಪು ವಿವಿ ವ್ಯಾಪ್ತಿಯ ಹಲವು ಕಾಲೇಜುಗಳಿಂದ ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದಾರೆ. ಸಹಕಾರ ಕ್ಷೇತ್ರದ ಅರಿವನ್ನು ವಿಸ್ತರಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ವಾಟಗೂಡು ಸುರೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕ ಹೆಚ್.ಎಲ್.ಷಡಾಕ್ಷರಿ, ಪ್ರಮುಖರಾದ ಹೆಚ್.ಎಸ್.ಸಂಜೀವ್ಕುಮಾರ್, ಕೆ.ಎಲ್.ಜಗದೀಶ್ವರ್, ಪಿ.ವೀರಮ್ಮ, ಜಿ.ಗಂಗಾ, ಪಿ.ಕರಿಯಪ್ಪ, ನಿಖಿಲ್, ಯಶವಂತ್ಕುಮಾರ್ ಹೆಚ್. ಷಫಿವುಲ್ಲಾ ಕೆ. ಮುಂತಾದವರು ಇದ್ದರು.
ನಂತರ ನಡೆದ ವಿಚಾರಗೋಷ್ಠಿಗಳಲ್ಲಿ ನಾಗಭೂಷಣ್ ಸಿ., ವಸಂತನಾಯ್ಕ ಬಿ., ಶ್ರೀಕಾಂತ್ ಬರುವೆ, ಡಾ.ಹೆಚ್.ವಿ.ನಾಗರಾಜ್,ಆಯುಷಾ ತಬಸ್ಸು ಮುಂತಾದವರು ತಮ್ಮ ವಿಚಾರಗಳನ್ನು ಮಂಡಿಸಿದರು. ಗೋಷ್ಠಿಗಳಲ್ಲಿ ರವಿ ಎನ್., ಡಾ.ವಿಶ್ವೇಶ್ವರಯ್ಯ, ಡಾ.ಕೃಪಾಲಿನಿ, ಡಾ.ಹಾಲಮ್ಮ ಎಂ., ಡಾ. ಶಂಭುಲಿಂಗ ಮೂರ್ತಿ, ಡಾ.ಕೆ.ಚಂದ್ರಪ್ಪ,ಡಾ.ಮಹಾದೇವ ಸ್ವಾಮಿ, ಡಾ.ಮಂಜುನಾಥ್ ಹೆಚ್.ಬಿ., ಡಾ.ಮುದುಕಪ್ಪ ಮುಂತಾದವರು ಇದ್ದರು. ಲತಿಕಾ ನಿರೂಪಿಸಿದರು