
ಶಿವಮೊಗ್ಗ ಮಾ.26ಸೊರಬ ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಕಷ್ಟು ಹಣವಿದ್ದು ಸಮಸ್ಯೆ ಇರುವ ಗ್ರಾಮಗಳ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಸೂಚಿಸಿದರು.

ಸೊರಬ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ರಚಿಸಲಾದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಕುರಿತು ಪಿಡಿಓ ಗಳು, ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹಣದ ಕೊರತೆ ಇಲ್ಲ. ಆದ್ದರಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದರು.

೩ ನೇ ವರ್ಷದಿಂದ ಜೆಜೆಎಂ ಗೆ ಶರಾವತಿಯಿಂದನೇ ನೀರು ಬರುತ್ತದೆ. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಹಾಗೂ ಕೊರತೆಗಳ ಸಂಪೂರ್ಣ ವರದಿ ನೀಡಿರಿ.ಸರಿಪಡಿಸಿಕೊಡಿತ್ತೇನೆ ಎಂದರು.
ಅಂಡಿಗೆ ಗ್ರಾ.ಪಂ ಯ ಉರುಗನಹಳ್ಳಿ, ಬೆನ್ನೂರು ಗ್ರಾ.ಪಂ ಉ ಕಮರೂರು, ಬೆನ್ನೂರು, ಭಾರಂಗಿಯ ಜೋಗಿಹಳ್ಳಿ, ಯಲಿವಾಳ, ಬೆಣ್ಣೆ ಲಗೇರಿ, ಗುಡ್ಡದ ಬೆಣ್ಣೆಗೇರಿ,
ಚಂದ್ರಗುತ್ತಿ ಬಸ್ತಿಕೊಪ್ಪ, ಕಡೆ ಜೋಳದಗುಡ್ಡೆ, ಮಳಲಿಕೊಪ್ಪ ಎಣ್ಣೆಕೊಪ್ಪ ಸೇರಿದಂತೆ ಸುಮಾರು ೩೫ ಗ್ರಾಮಗಳಲ್ಲಿ ಕುಡಿಯುವ ನೀರಿ ಸಮಸ್ಯೆ ಬರಬಹುದೆಂದು ಗುರುತಿಸಲಾಗಿದೆ. ಹಲವೆಡೆ ಹೊಸ ಬೋರ್ ಅವಶ್ಯಕತೆ ಇದೆ.
ಬೋರ್ವೆಲ್ ಬೇಕಾ, ಜಾಕ್ವೆಲ್ ಬೇಕಾ ಅಥವಾ ಖಾಸಗಿ ಬೋರ್ ನೀರು ಬೇಕಾ ಎಂದು ಪಿಡಿಓ ಗಳು ತೀರ್ಮಾನ ಮಾಡಿ ಅಧಿಕಾರಿಗಳಿಗೆ ಕಳುಹಿಸಿ ಎಂದು ಸೂಚಿಸಿದ ಅವರು ಕುಡಿಯುವ ನೀರಿನ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದರು.

ಶರಾವತಿ ಯಿಂದ ನೀರು ತರುವ ಯೋಜನೆಯಿಂದ ಮುಂದೆ ಕುಡಿಯುವ ನೀರು ಸಿಗಲಿದೆ. ಬೋರ್ ವೆಲ್ ಅವಶ್ಯಕತೆ ಮುಂದೆ ಅಷ್ಟಾಗಿ ಬರಲಾರದು. ಆದ್ದರಿಂದ ಆದಷ್ಟು ಖಾಸಗಿ ಬೋರ್ ನಿಂದ ನೀರು ತರಿಸಿಕೊಳ್ಳಲು ಕ್ರಮ ವಹಿಸಿರಿ. ತೀರಾ ಅವಶ್ಯಕತೆ ಇರುವೆಡೆ ಹೊಸ ಬೋರ್ ಕೊರೆಸುವಂತೆ ತಿಳಿಸಿದರು.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದಾದ ೪೩ ಗ್ರಾಮಗಳಲ್ಲಿ ರೂ.೯೪ .೪೦ ವೆಚ್ಚದಲ್ಲಿ ಕೊಳವೆ ಬಾವಿ ಅಳವಡಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಹಾಗೂ ಸೊರಬ ತಾಲ್ಲೂಕು ನೋಡಲ್ ಅಧಿಕಾರಿ ಹನುಮಾ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದಾದ ಗ್ರಾಮಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ಹೊಸ ಬೊರ್ ವೆಲ್ ಅವಶ್ಯಕತೆ ಇದ್ದು, 15 ನೇ ಹಣಕಾಸು ಆಯೋಗದ ಅನುದಾನದಲ್ಲಿ ರೂ.8.73 ಕೋಟಿ ಬಾಕಿ ಉಳಿದಿದೆ. ಈ ಅನುದಾನದಿಂದ ಅವಶ್ಯವಿರುವೆಡೆ ಬೋರ್ ವೆಲ್ ಮಾಡಿಸಿಕೊಡಬಹದು ಎಂದರು.
ತಾಲ್ಲೂಕಿನ ಕ್ಷಯಮುಕ್ತ ೧೫ ಗ್ರಾ.ಪಂಗಳಿಗೆ ಬೆಳ್ಳಿ ಮತ್ತು ಕಂಚಿನ ಪದಕ ಮತ್ತು ಪ್ರಶಸ್ತಿಯನ್ನು ಸಚಿವರು ಇದೇ ಸಂದರ್ಭದಲ್ಲಿ ವಿತರಿಸಿದರು.
ಸಭೆಯಲ್ಲಿ ಸೊರಬ ತಹಶೀಲ್ದಾರ್ ಮಂಜುಳಾ,ಸೊರಬ ಇಓ ಪ್ರದೀಪ್, ಕೆಡಿಪಿ ಸದಸ್ಯರು, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು