
ಶಿವಮೊಗ್ಗ,ಮಾ.೨೬:
ಶಿವಮೊಗ್ಗ : ಸಿದ್ದೇಶ್ವರ ಫಿಲಂಸ್ ಲಾಂಛನದಡಿ ಭದ್ರಾವತಿ ತಾಲೂಕು ಆನವೇರಿ ಸುತ್ತಮುತ್ತಲ ಗ್ರಾಮದ ಯುವ ಪ್ರತಿಭೆಗಳೇ ನಿರ್ಮಿಸಿ, ನಿರ್ದೇಶಿಸಿರುವ ’ಉದಯ ಸೂರ್ಯ’ಚಿತ್ರವು ಏಪ್ರಿಲ್ ೨೫ ರಂದು ರಾಜ್ಯಾಧ್ಯಂತ ಬಿಡುಗಡೆ ಆಗಲಿದ್ದು, ಅದರ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಮಾ.೨೬ ರಂದು ಬುಧವಾರ ಆನವೇರಿ ’ಶ್ರೀದೇವಿ’ ಚಿತ್ರ ಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.

ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭಕ್ಕೂ ಮುನ್ನ ಚಿತ್ರ ತಂಡವು, ಚಿತ್ರದ ವಿಶೇಷತೆ ಕುರಿತು ಮಾತನಾಡಿತು. ಆನವೇರಿ ಗ್ರಾಮದ ಮಂಜುನಾಥ್ ಎಸ್.ಪಿ., ಸುನೀಲ್ ಎಂ., ಹರೀಶ್ ಹೆಚ್.ಎಸ್. ಹಾಗೂ ಎಸ್. ಎಸ್. ಪ್ರಕಾಶ್ ರಾಜ್ ನಿರ್ಮಾಣದ ಈ ಚಿತ್ರಕ್ಕೆ ನಿರ್ಮಾಪಕರೂ ಆದ ಹಂಚಿನ ಸಿದ್ದಾಪುರದ ಎಸ್. ಎಸ್. ಪ್ರಕಾಶ್ ರಾಜ್ ಅವರೇ ನಿರ್ದೇಶನ ಮಾಡಿದ್ದಲ್ಲದೆ, ತಾವೇ ಚಿತ್ರದ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಮಾಧ್ಯಮದ ಮುಂದೆ ಚಿತ್ರದ ವಿಶೇಷತೆ ಹಂಚಿಕೊಂಡ ನಿರ್ದೇಶಕ ಪ್ರಕಾಶ್ ರಾಜ್ ಅವರು, ಉದಯ ಸೂರ್ಯ ಪಕ್ಕಾ ಹಳ್ಳಿ ಸೊಗಡಿನ ನೈಜ ಕಥಾ ಹಂದರದ ಚಿತ್ರ. ಆನವೇರಿ, ಮೈದೊಳು, ಮಲ್ಲಾಪುರ , ಹಂಚಿನ ಸಿದ್ದಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕಥೆ ಮತ್ತು ಪಾತ್ರಕ್ಕೆ ತಕ್ಕಂತೆ ಒಳ್ಳೆಯ ಅನುಭವಿ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ಈಗ ರಿಲೀಸ್ ಗೆ ಸಿದ್ದತೆ ನಡೆಸಿದ್ದೇವೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಹೊಸಬರನ್ನು ಪ್ರೋತ್ಸಾಹಿಸಿ, ಬೆಳೆಸುವುದು ಪ್ರೇಕ್ಷಕರ ಮೇಲಿದೆ. ನಮ್ಮನ್ನು ಹಾರೈಸಿ, ಬೆಳೆಸಿ ಎಂದು ನಾವು ಅವರನ್ನು ಕೇಳಿಕೊಳ್ಳುತ್ತೇವೆ ಎಂದರು.

ನಿರ್ಮಾಪಕರಾದ ಮಂಜುನಾಥ್ ಎಸ್.ಪಿ ಮಾತನಾಡಿ, ಚಿತ್ರರಂಗಕ್ಕೆ ನಾವು ಹೊಸಬರು. ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದೇವೆ. ಸಿನಿಮಾ ಮಾಡಿ, ಲಾಭ ಮಾಡಬೇಕು ಎನ್ನುವುದಕ್ಕಿಂತ ನಿರ್ದೇಶಕನಾಗಬೇಕೆನ್ನುವ ಗೆಳೆಯ ಆಸೆಯನ್ನು ಈಡೇರಿಸಬೇಕು, ಪ್ರೇಕ್ಷಕರಿಗೆ ಹಳ್ಳಿ ಸೊಗಡಿನ ಸದಾಭಿರುಚಿಯ ಸಿನಿಮಾ ಕೊಡಬೇಕೆನ್ನುವ ಉದ್ದೇಶದೊಂದಿಗೆ ಈ ಸಿನಿಮಾ ಮಾಡಿದ್ದೇವೆ. ಪ್ರೇಕ್ಷಕರು ಅನೇಕ ಮಂದಿ ಹೊಸಬರನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಅದೇ ರೀತಿ ಈ ಚಿತ್ರಕ್ಕೂ ಪ್ರೋತ್ಸಾಹ ನೀಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.
ಮತ್ತೋರ್ವ ನಿರ್ಮಾಪಕ ಸುನೀಲ್ ಮಾತನಾಡಿ, ನಾನೊಬ್ಬ ಐಟಿ ಉದ್ಯೋಗಿ. ನಾನು ಕಥೆ ಕೇಳಿಲ್ಲ, ಗೆಳೆಯ ನಿರ್ದೇಶಕನಾಗುವ ಆಸೆಯನ್ನು ಈಡೇರಿಸುವುದಕ್ಕಾಗಿ ಈ ಸಿನಿಮಾ ಮಾಡಿದ್ದೇವೆ ಎಂದರು. ನಾಯಕಿ ತ್ರಿವೇಣ ಕೆ, ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಶಿವಮೊಗ್ಗ ರಾಮಣ್ಣ, ಧಾನಂ ಅವರು ಚಿತ್ರದಲ್ಲಿನ ಪಾತ್ರಗಳ ಕುರಿತು ಮಾತನಾಡಿದರು. ಉಳಿದಂತೆ ಚಿತ್ರದ ತಾರಾಗಣದಲ್ಲಿ ಜೈರಾಜ್, ಗೌಡಿಹುಳಿಯಾರ್, ಜೀವಮಹೇಶ್, ಅಶೋಕ್ನಾಯ್ಕ್, ಪ್ರಶಾಂತ್ಜೈ, ತನುಪ್ರಸಾದ್, ವೈಷ್ಣವಿ, ಲಾವಣ್ಯಗಂಗಾಧರಯ್ಯ, ಮಣಿಮೈದೊಳಲು,ಪ್ರಶಾಂತ್ಪವರ್, ತನುಜಾ ಮುಂತಾದವರು ನಟಿಸಿದ್ದಾರೆ. ನಿರ್ದೇಶಕ ಪ್ರಕಾಶ್ ರಾಜ್ ಅವರೇ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.ಏಳು ಹಾಡುಗಳಿಗೆ ಯಶವಂತ ಭೂಪತಿ ಸಂಗೀತ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಸಂಕಲನ ಮಲ್ಲಿ, ಸಾಹಸ ವೈಲೆಂಟ್ ವೇಲು, ನೃತ್ಯ ಸ್ಟಾರ್ ನಾಗಿ, ಕಲೆ ನವೀನ್ ಹಾಡೋಹಳ್ಳಿ-ಸಚ್ಚಿನ್ ಗೌಡ ಹಾಸನ್ ಅವರದಾಗಿದೆ. ಎ೨ ಮ್ಯೂಸಿಕ್ ಆಡಿಯೋ ಹಕ್ಕುಗಳ

ನ್ನು ಪಡೆದುಕೊಂಡಿದ್ದು, ಸಚಿತ್ ಫಿಲಿಂಸ್ನ ವೆಂಕಟ್ ಗೌಡ ವಿತರಣಾ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಆನಂತರ ನಡೆದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ. ಹನುಮಂತು, ಕಾಂಗ್ರೆಸ್ ಮುಖಂಡ ದೇವಿಕುಮಾರ್, ಆನವೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಾರ್ವತಮ್ಮ ಪರಮೇಶ್ವರಪ್ಪ, ದ್ರಾಕ್ಷಾಯಣಮ್ಮ ಸಿದ್ದಪ್ಪ ಗೌಡ್ರು, ಭಾಗ್ಯಮ್ಮ ಷಣ್ಮುಖಪ್ಪ, ಹೆಂಚಿನಾ ಸಿದ್ದಾಪುರ ಗ್ರಾಮದ ಮುಖಂಡರಾದ ರತ್ಮಮ್ಮ ಮಹೇಶ್ವರಪ್ಪ, ಚಲನಚಿತ್ರ ವಿತಕರ ವೆಂಕಟ್ ಗೌಡ ಹಾಜರಿದ್ದು ಶುಭ ಹಾರೈಸಿದರು.