
“”
ತಪ್ಪು ಮಾಡದಿದ್ದರೆ ಸಿಡಿದೇಳಿ, ತಿರುಗಿ ಬಡಿಯೋ ಬುದ್ದಿ ಕಲೀರಿ
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ -38
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಸಮಾಜದ ಮುಖವಾಣಿಯಲ್ಲಿ ನಾನು ಅತಿ ಹೆಚ್ಚು ಮುಖ್ಯಸ್ಥ, ಸಮಾಜ ಸೇವೆಯೇ ನನ್ನ ಧ್ಯೇಯ ಎಂದು ಅನ್ಯರಿಂದ ಬೆದರಿಸಿ, ಹೆದರಿಸಿ, ಈ ಸಮಾಜ ಸೇವೆಯ ಹೆಸರು ಹೇಳಿ ವಸೂಲಿ ಮಾಡಿ ಕೊನೆಯ ಪಕ್ಷ ಎಂಬಂತೆ ಕನಿಷ್ಠ ಸಹಾಯ ಮಾಡಿದೆನೋ ಎಂದು ಪೋಸು ಕೊಡುವ ನಮ್ಮ ನಡುವಿನ ಸ್ಟಂಟ್ ನಾಯಕರುಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಇವರು ಬರುವ ಮುಂದಿನ ದಿನದಲ್ಲಿ ಆಡಂಬರದ ಅಧಿಕಾರಗಿಟ್ಟಿಸಿಕೊಳ್ಳುವ ನಾಟಕವಾಡುತ್ತಾರೆ. ಈ ಸ್ಟಂಟ್ ನಾಯಕರನ್ನು, ಇವರ ಸಮಾಜ ಸೇವೆಯನ್ನು ಯಾವತ್ತು ತಿರಸ್ಕರಿಸಿ ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಸಮಾಜದ ಮುಖ್ಯ ವಾಹಿನಿಗಳಲ್ಲಿ ಗುರುತಿಸಿಕೊಳ್ಳುತ್ತಾ, ತನ್ನನ್ನು ತಾನು ಹೀರೊ ಮಾಡಿಕೊಂಡು ನಾನು ದೊಡ್ಡ ಧ್ವನಿಯವನು, ನಿಮ್ಮ ಪರವಾಗಿ ನಾನಿದ್ದೇನೆ ಎಂದು ಹೇಳುತ್ತಲೇ ಚಿಕ್ಕಪುಟ್ಟ ವಿಷಯಗಳಿಗೆ ಪೊಲೀಸ್ ಸ್ಟೇಷನ್ ಸುತ್ತುತ್ತಾ ಅಲ್ಲಿ ನ್ಯಾಯ ಅನ್ಯಾಯ ಯೋಚಿಸದೇ ತಮಗೆ ಯಾವ ಕಡೆಯಿಂದ ಲಾಭ ಇದೆ ಎಂದು ನಮ್ಮ ನಡುವೆಯೇ ಎರಡು ಭಾಗವನ್ನು ಸೃಷ್ಟಿಸಿ ಹೀರೋ ತರ ಪೋಸು ಕೊಡುವ ಕೆಲವೇ ಕೆಲವು ಸ್ಟಂಟ್ ಮಾಸ್ಟರ್ ಗಳನ್ನು ಮುಗ್ಧ ಹಾಗೂ ಸಬ್ಯರನ್ನು ನಮ್ಮ ನಡುವೆ ಬೆಳೆಸಬೇಕೆಂಬ ಆಸೆ ಹೊತ್ತಿರುವ ಜನ ದೂರವಿಡುವ ಅತ್ಯಗತ್ಯದ ಅನಿವಾರ್ಯತೆ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಕರೋನಾ ಅವಧಿಯಲ್ಲಿ ಅಕ್ಕಿ ಕೊಡುತ್ತೇವೆ ಎಂದು ಒಂದಿಷ್ಟು ಪ್ಯಾಕೆಟ್ ಗಳನ್ನು ಎಲ್ಲೋ ಪಡೆದು ಬಂದು ಪೋಸ್ ಕೊಟ್ಟು ನಂತರ ಅಮಾಯಕರ, ಅಸಹಾಯಕರ ಹೆಸರು ಬಳಸಿಕೊಂಡು ನೇರ ಕೇಳಲಾಗದ, ನೇರ ತಿನ್ನಲಾಗದ ವ್ಯವಹಾರವನ್ನು ಮುಗಿಸುವ ನಯವಂಚಕ ಮನಸ್ಸುಗಳು ನಮ್ಮ ನಡುವೆ ಇತ್ತೀಚೆಗೆ ಕಂಡುಬರುತ್ತಿರುವುದು ದುರಂತವೇ ಹೌದು.

ಮತ್ತೊಂದು ವಿಚಿತ್ರವೆಂದರೆ ಕೈಯಿಂದ ಉದಾರವಾಗಿ ಕೊಡುವ ಮನುಷ್ಯತ್ವದ ಮನಸುಗಳು ಇಂತಹ ಪುಕ್ಕಟ್ಟೆ ಪೋಸಿನ ಜನರ ವರ್ತನೆಯಿಂದ ತಮ್ಮ ಉದಾರತೆಯನ್ನು ಪಕ್ಕಕ್ಕೆ ತಳ್ಳುತ್ತಿರುವುದು ಇತ್ತೀಚಿನ ನೋವಿನ ಸಂಗತಿ ಎಂದರೆ ತಪ್ಪಾಗಲಿಕ್ಕಿಲ್ಲ.
ನಮ್ಮ ನಡುವೆ ಇನ್ನೊಂದು ಬಗೆಯ ವ್ಯಕ್ತಿಗಳಿದ್ದಾರೆ, ಏನಾದರೂ ಆಗಲಿ ನಾನು ಅಲ್ಲಿ ಕಾಣಬೇಕು. ನಾನಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಂಬಂಧವಿಲ್ಲದ, ಅಗತ್ಯವಿಲ್ಲದ, ಅನಿವಾರ್ಯತೆ ಇಲ್ಲದ ಯಾರದೋ ಕಾರ್ಯಕ್ರಮದ ಮುಖವಾಣಿಯಾಗಿ ಫೋಸ್ ನೀಡುತ್ತಾ, ಯಾರದು ಖರ್ಚನ್ನು ನೆಕ್ಕಿ “ಸಮಾಜ ಸೇವಕ” ಎಂಬ ಹೆಸರು ತೊಟ್ಟು ಬರುವ ಕಿರಾತಕ ಮನಸುಗಳು ನಮ್ಮ ನಡುವೆ ಕಾಣಿಸುತ್ತಿವೆ. ಅಲ್ಲಿನ ಸಕಾರಾತ್ಮಕ ಹಾಗೂ ಸಮಾಜದ ಉದ್ದೇಶದ ಕಾರ್ಯಕ್ರಮಗಳಲ್ಲಿ ತಮ್ಮ ಮುಖವನ್ನು ದೊಡ್ಡದಾಗಿ ಬಿಂಬಿಸುತ್ತಾ ಅದರ ನೆನಪುಗಳಲ್ಲಿ ತಾನೇ ಇಂತಹ ಕಾರ್ಯಕ್ರಮ ಮಾಡಿದ್ದೇನೆ ಎಂಬಂತೆ ಬಿಂಬಿಸಿಕೊಳ್ಳುವ ಬಗೆಯ ವ್ಯಕ್ತಿಗಳನ್ನು ಸಹ ನಾವು ಕಾಣುತ್ತಿದ್ದೇವೆ.

ಕರೆಯದೆ ಬರುವವರನ್ನು ಕರೆದು ಕೆರದಲ್ಲಿ ಹೊಡೆಯೆಂದ ಸರ್ವಜ್ಞ ಎಂಬ ಸರ್ವಜ್ಞರ ವಚನ ಇಂತಹ ಮನುಷ್ಯರಿಗೆ ಗೊತ್ತಿರಲಿಕ್ಕಿಲ್ಲ, ಅಥವಾ ಅದರ ಅರ್ಥ ತಿಳಿದಿರಲಿಕ್ಕಿಲ್ಲ ಅಲ್ಲವೇ?.
ಸಮಾಜ ಎಲ್ಲಾ ಕಡೆಗಳಲ್ಲೂ ಅತ್ಯಂತ ವಿಭಿನ್ನ,ವಿಚಿತ್ರ ಎನಿಸುವ ವ್ಯಕ್ತಿಗಳನ್ನು ಕಾಣುತ್ತದೆ. ಆತನ ಮುಖವಾಣಿ ಒಂದು ಬಗೆಯಾದರೆ ಆತನ ಒಳ ವರ್ತನೆಯೇ ಆತನ ವ್ಯಕ್ತಿತ್ವವೇ ಮತ್ತೊಂದು ಬಗೆಯಾಗಿರುವ ಅಂಶಗಳು ಸಹ ನಮ್ಮ ನಡುವೆ ಕಾಣಿಸುತ್ತವೆ ಅಲ್ಲವೇ?