
ಶಿವಮೊಗ್ಗ : ಮಾ.21, ಸಂಸ್ಕೃತಿ ಹಾಗೂ ಸಂಸ್ಕಾರವಿಲ್ಲದ ಬದುಕು ಅರ್ಥವಿಲ್ಲದ್ದು, ಮಕ್ಕಳಲ್ಲಿ ನಾವು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಹುಟ್ಟು ಹಾಕಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ನಿತ್ಯ ಶ್ರಮ ವಹಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅವರು ನಿನ್ನೆ ನಡೆದ ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಯುಕೆಜಿ ವಿದ್ಯಾರ್ಥಿಗಳ ವಿದ್ಯಾ ಸನ್ಮಾನ್ ದಿನವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಬೆಳೆಯುವ ಕುಡಿ ಮೊಳಕೆಯಲ್ಲಿ ಎಂಬ ನಾನ್ನುಡಿಯಂತೆ, ಪೋಷಕರು ಮಕ್ಕಳಿಗೆ ರಾಮಾಯಣ ಮಹಾಭಾರತದಲ್ಲಿ ಬರುವ ಆದರ್ಶ ಗುಣಗಳನ್ನು ಮಕ್ಕಳಲ್ಲಿ ಅಳವಡಿಸಿದಾಗ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಋದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ಶಾಲೆಯಲ್ಲಿ ಶಿಕ್ಷಕರ ಪಾತ್ರ ಎಷ್ಟಿರುತ್ತದೆಯೋ, ಅದರ ಎರಡರಷ್ಟು ಜವಾಬ್ದಾರಿಯನ್ನು ಪೋಷಕರು ತೆಗೆದುಕೊಳ್ಳಬೇಕು. ಮಕ್ಕಳ ಎದುರಿನಲ್ಲಿ ದೊಡ್ಡವರಾದ ನಾವು ಸುಸಂಸ್ಕೃತರಾಗಿದ್ದಾಗ ಮಾತ್ರ, ನಾವು ಮಕ್ಕಳಲ್ಲಿಯೂ ಸಂಸ್ಕಾರವನ್ನು ಕಾಣಬಹುದು,ಆಗ ಮಾತ್ರ ಮಕ್ಕಳ ಭವಿಷ್ಯ ಅಮೃತವಾಗುತ್ತದೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಸಂಸ್ಕೃತಿ, ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ , ಶಿಕ್ಷಕರು ಕೇವಲ ಪಾಠ ಪ್ರವಚನಕ್ಕೆ ಮಾತ್ರ ಸೀಮಿತವಾಗದೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಗೆಳೆಯಬೇಕು. ಅದರ ಜೊತೆಗೆ ಪಾಲಕರು ಹಾಗೂ ಶಿಕ್ಷಕರು, ಮಕ್ಕಳು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಭದ್ರಾವತಿಯ ಬುಳ್ಳಾಪುರದ ಬಿಜಿಎಸ್ ನರ್ಸರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶಾರದಾ ಬಿ.ಹೆಚ್. ಗುರುಪುರದ ಬಿಜಿಎಸ್ ಶಾಲಾ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಮತ್ತು ಪುಟಾಣಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಣಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ದಿನಮಾನಗಳಲ್ಲಿ ಕಂಡು ಬರುತ್ತಿದ್ದು, ಇಂದು ಶಿಕ್ಷಣ ಕೇವಲ ಕಲಿಕೆಯಾಗದೆ ಅದು ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಸಹ ಬಿಂಬಿಸುವ ಅಂಶವಾಗಬೇಕಿದೆ.ಮಕ್ಕಳನ್ನು ಎಲ್ಲೋ ಒಂದು ಕಡೆ ಇಟ್ಟು ಓದಿಸಿದಾಗ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬುದು ಭ್ರಮೆ, ಮಕ್ಕಳನ್ನು ಪೋಷಕರು ಅತಿ ಜಾಗರೂಕತೆಯಿಂದ ನೋಡಿಕೊಂಡಾಗ, ಶಿಕ್ಷಕ ವಲಯ ಅವರನ್ನು ಶಿಕ್ಷಣ ನೀಡುವ ವಿಷಯದಲ್ಲಿ ಎಚ್ಚರಗೊಳಿಸಿದಾಗ ಉತ್ತಮವಾದ ಶಿಕ್ಷಣ ಮಗುವಿಗೆ ದೊರಕುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಸ್ಕಾರಯುತ ಪ್ರಜೆಗಳನ್ನಾಗಿ ಬೆಳೆಸುವುದು ಮುಖ್ಯ.
— ಸುರೇಶ್ ಎಸ್. ಎಚ್. ಪ್ರಾಂಶುಪಾಲರು, ಬಿಜಿಎಸ್ ಶಾಲಾ-ಕಾಲೇಜು ಗುರುಪುರ, ಶಿವಮೊಗ್ಗ.