
ಶಿವಮೊಗ್ಗ : ನಗರದೆಲ್ಲೆಡೆ ಇಂದು ಹೋಳಿ ಹಬ್ಬದ ಸಂಭ್ರಮ ಕಂಡುಬಂದಿತು. ಮೈ ತುಂಬ ಬಣ್ಣ ಬಳಿದುಕೊಂಡ ಯುವಕ, ಯುವತಿಯರು ಪರಸ್ಪರ ಬಣ್ಣ ಎರಚುತ್ತ ಸಂಭ್ರಮದಲ್ಲಿ ಮಿಂದೆದ್ದರು.
ಹೋಳಿ ಹಬ್ಬದ ಅಂಗವಾಗಿ ಚಿಣ್ಣರು, ಯುವಕರು, ಯುವತಿಯರು ಹಾಗೂ ನಾಗರಿಕರು ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಭ್ರಾತೃತ್ವದ ಕೊಂಡಿ ಬೆಸೆಯುವ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬ ನಗರದ ಜನತೆಯ ಮನಸ್ಸನ್ನು ಓಕುಳಿಯಲ್ಲಿ ತೇಲಿಸಿತು. ಹಿರಿಯರು ಕಿರಿಯರೆನ್ನದೆ, ಜಾತಿ ಭೇದ-ಭಾವ ಮರೆತು ಭಾವೈಕ್ಯದಿಂದ ಕೂಡಿ ಬಣ್ಣದ ಜಗತ್ತಿನಲ್ಲಿ ಮಿಂದೆದ್ದರು.
ಶಿವಮೊಗ್ಗ ನಗರದ ಗಾಂಧಿ ಬಜಾರ್, ದುರ್ಗಿಗುಡಿ, ವಿನೋಬನಗರ, ಕೋಟೆ ರಸ್ತೆ, ಶರಾವತಿ ನಗರ, ಹೊಸಮನೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿಯನ್ನು ಸಡಗರದಿಂದ ಆಚರಿಸಿದರು.

ಗಾಂಧಿಬಜಾರ್, ರವಿವರ್ಮ ಬೀದಿ, ಕುಂಬಾರ ಬೀದಿ ಸೇರಿದಂತೆ ಹಲವೆಡೆ ಮನ್ಮಥನನ್ನು ಪ್ರತಿಷ್ಠಾಪಿಸಲಾಗಿತ್ತು. ಗುರುವಾರ ಮಧ್ಯಾಹ್ನ ಕಾಮ ದಹನ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.

ಪೊಲೀಸರ ಕಟ್ಟೆಚ್ಚರದ ನಡುವೆಯೂ ಯುವಕ, ಯುವತಿಯರು ಜೋರಾಗಿ ಕೂಗತ್ತಾ, ಬೈಕ್ ರೈಡ್ ನಡೆಸುತ್ತಾ ಸಾಗುತ್ತಿರುವುದು ಸಾಮಾನ್ಯವಾಗಿತ್ತು. ಕೆಲವು ಕಡೆ ಗುಂಪುಗುಂಪಾಗಿ ಮಡಕೆ ಒಡೆಯುವುದು, ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡುವುದು ಕಂಡುಬಂತು. ಪುಟ್ಟ ಮಕ್ಕಳು ಪರಸ್ಪರ ಬಣ್ಣದ ನೀರು ಎರಚಿ, ಬಣ್ಣದಲ್ಲಿ ಹಾಕಿ ಹೋಳಿಯಲ್ಲಿ ಮಿಂದೆದ್ದರು.
ಶಿವಮೊಗ್ಗದ ಗೋಪಿ ವೃತ್ತದಲ್ಲಿ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬದ ಪಯುಕ್ತ ಡಿಜೆ, ನೃತ್ಯ, ದೊಡ್ಡ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೇಸರಿ ಅಲಂಕಾರ ಸಮಿತಿ ವತಿಯಿಂದ ಅದ್ಧೂರಿಯಾಗಿ ರಂಗಿನ ಹಬ್ಬ ಆಚರಿಸಲು ಅವಕಾಶ ಕಲ್ಪಿಸಲಾಗಿತ್ತು. ನೃತ್ಯ, ಡಿಜೆ ಸೌಂಡ್, ಒಬ್ಬರಿಗೊಬ್ಬರು ನೀರೆರೆಚುವ ಮೂಲಕ ಸಾವಿರಾರು ಯುವಕ-ಯುವತಿಯರು ಖುಷಿಯ ಸಾಗರದಲ್ಲಿ ಕುಣಿದು ಕುಪ್ಪಳಿಸಿದರು.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿತ್ತು. ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರನ್ನು ರಕ್ಷಣಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು.
ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಕೆಲವರು ಹಾಡುಗಳಿಗೆ ಹಜ್ಜೆ ಹಾಕಿದರು. ಕೆಲವರು ತಮ್ಮ ಮಕ್ಕಳನ್ನು ಕರೆತಂದು ಓಕುಳಿ ಆಟವಾಡಿ ಖುಷಿ ಪಟ್ಟರು. ಯುವಕರು ಹಾಡುಗಳಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.
ಗೋಪಿ ವೃತ್ತದಲ್ಲಿ ಹೋಳಿ ಆಚರಣೆ ಕಾರಣ ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿಬಂಧಿಸಲಾಗಿತ್ತು.

ಹೋಳಿ ಆಚರಣೆ ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಎಂ.ಜಿ. ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಳಿಗೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತು ಜನರು ವೀಕ್ಷಿಸಿದರು. ಮೈತುಂಬ ಬಣ್ಣ ಹಚ್ಚಿಕೊಂಡ ಜನರು, ಸೆಲ್ಫಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.

ಹೋಳಿ ಹಬ್ಬದ ಸಂಭ್ರಮದ ನಡುವೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.