
ಕ್ರೀಡೆಗಳಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಆರೋಗ್ಯಕ್ಕೆ ಆಟಗಳೇ ಉತ್ತಮ ಮದ್ದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.
ನಗರದ ಗೋಪಾಲ ಬಡಾವಣೆಯಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಉದ್ಘಾಟಿಸಿ, ಎಂಸಿಸಿ ಕಪ್ ಸೀಸನ್-೨ ಟೆನ್ನಿಸ್ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆ ಮನಸ್ಸುಗಳನ್ನು ಪರಸ್ಪರ ಹತ್ತಿರವಾಗಿಸುತ್ತದೆ. ಆಟಗಳಿಂದ ಸ್ನೇಹ ಮತ್ತಷ್ಟು ಗಟ್ಟಿಯಾಗುತ್ತದೆ. ಮಹಾ ಶಿವರಾತ್ರಿ ದಿನದಂದೇ ಉದ್ಘಾಟನೆಗೊಂಡಿರುವ ಈ ಸಂಘ ಸಾಕಷ್ಟು ಉನ್ನತಿ ಸಾಧಿಸಲಿ. ಸಾಮಾಜಕ್ಕೆ ಉತ್ತಮ ಕೊಡುಗೆ ನೀಡಲಿ ಎಂದು ಶುಭ ಕೋರಿದರು.
ರಾಜ್ಯ ಹಿಂದುಳಿದ ವರ್ಗಗಳ ಸಂಯೋಜಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಜಿ.ಡಿ.ಮಂಜುನಾಥ್ ಮಾತನಾಡಿ,

ಸಚಿವ ಮಧು ಬಂಗಾರಪ್ಪ ಅವರ ಸತತ ಪರಿಶ್ರಮದ ಫಲವಾಗಿ ಗೋಪಾಲಗೌಡ ಬಡಾವಣೆಯಲ್ಲಿ ಬ್ಯಾಂಡ್ಮಿಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸಮ್ಮತಿ ಸೂಚಿಸಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರಿನಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಗಂಣ ತಲೆ ಎತ್ತಲಿದ್ದು, ಈಗಾಗಲೇ ೩೦ ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದರು.

ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾ ನಾಯಕ್ ಆಟಗಾರರಿಗೆ ಶುಭ ಕೋರಿದರು.
ಬಿಜೆಪಿ ಶಿವಮೊಗ್ಗ ನಗರ ಘಟಕದ ಉಪಾಧ್ಯಕ್ಷ ಎಸ್.ಕುಮಾರ್, ಸಂಘದ ಗೌರವ ಅಧ್ಯಕ್ಷ ಎಂ.ಗೋವಿಂದರಾಜು, ಅಧ್ಯಕ್ಷ ಎಂ.ಡಿ.ಶ್ರೀನಿವಾಸ್, ಉಪಾಧ್ಯಕ್ಷ ಕೆ.ಅಶೋಕ್ ಕುಮಾರ್, ಕಾರ್ಯದರ್ಶಿ ಹರಿಪ್ರಕಾಶ್ ಇತರರು ಇದ್ದರು.