ಶಿವಮೊಗ್ಗ, ಫೆ.೦೬: ಕನ್ನಡಿಗರು ಅತ್ಯಂತ ಎಚ್ಚರದಿಂದ ಇರಬೇಕಾದ ಸಂದರ್ಭ ಬಂದಿದೆ ಎಂದು ಸಾಹಿತಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಅವರು ಇಂದು ಗೋಪಿಶೆಟ್ಟಿಕೊಪ್ಪದ ಚಾಲ್ಯಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಶಿವಮೊಗ್ಗ ಜಿಲ್ಲಾ ೧೯ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಒಂದು ಮೌಖಿಕ ಪರಂಪರೆಯಿತ್ತು. ಹೇಳುವ, ಕೇಳುವ ಪರಂಪರೆಯಿತ್ತು. ಜನಪದ, ಒಗಟು, ಕಾವ್ಯ ಹೀಗೆ ಸಮೃದ್ಧಿಯಾದ ಜಾನಪದ ಕನ್ನಡ ಕೈಗಾರಿಕಾ ಕ್ರಾಂತಿಯ ನಂತರ ಬಂದ ಮುದ್ರಣ ಪ್ರಪಂಚಕ್ಕೆ ಕಾಲಿಟ್ಟಾಗಲೂ ಕೂಡ ಅದು ಸಮೃದ್ಧಿಯಾಗಿಯೇ ಇತ್ತು. ಕೇಳು ಜನಮೇಜಯ ಸಂಸ್ಕೃತಿಯಿಂದ ಓದಿಗೆ ಬಂದು ನಂತರ ನೋಡು ಜನಮೇಜಯ ಎಂಬಲ್ಲಿಗೆ ಅದು ತಲುಪಿದ ಮೇಲೆ ಭಾಷೆಯ ಹಿಡಿತವೇ ಭಾಷಾ ಪ್ರೇಮವೇ ಸಡಿಲಗೊಂಡಿತು ಎಂದರು.
ನಾವು ಈಗ ಸಾಮಾಜಿಕ ಜಾಲತಾಣದ ಲೋಕದಲ್ಲಿದ್ದೇವೆ. ಕೋಟಿ ಕೋಟಿ ಭಾರತದ ಜನರು ಸಾಮಾಜಿಕ ಜಾಲತಾಣಕ್ಕೆ ದಾಸರಾಗಿದ್ದಾರೆ. ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ನಾವೀಗ ಕಾಲಿಟ್ಟಿದ್ದೇವೆ. ದೃಶ್ಯ ಮಾಧ್ಯಮಗಳು ನಮ್ಮನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹೊರಟಿವೆ. ನೋಡುವ ಸಂಸ್ಕೃತಿಯನ್ನು ಹೇರಲಾಗುತ್ತಿದೆ. ಇದು ಸತ್ಯದ ಶೋಧನೆಯಾಗಿ ಉಳಿದಿಲ್ಲ. ಸತ್ಯದ ಉತ್ಪಾದನೆಯಾಗುತ್ತಿದೆ. ಆಗಾಗಿ ಈ ದಾಳಿಗೆ ಮೊದಲು ಬಲಿಯಾಗುತ್ತಿರುವುದು ಕನ್ನಡ ಭಾಷೆ ಎಂದರು.
ಒಳ್ಳೆಯದು, ಕೆಟ್ಟದ್ದು ಎಂಬ ಗೊಂದಲಗಳನ್ನು ಸಾಮಾಜಿಕ ಜಾಲತಾಣಗಳು ಸೃಷ್ಟಿಸತೊಡಗಿವೆ. ಸಾಮಾಜಿಕ ಜಾಲತಾಣಗಳು ಗ್ರಾಹಕರನ್ನು ಹುಡುಕುವ ಸಂಸ್ಥೆಯಾಗಿದೆ. ಅವರಿಗೆ ಗಿರಾಕಿಗಳು ಬೇಕಷ್ಟೆ. ಭಾಷೆಯಲ್ಲ. ಮಕ್ಕಳ ಕೈಯಲ್ಲಿ ಮೊಬೈಲು ಸಿಕ್ಕು, ಅದನ್ನು ನಿಯಂತ್ರಿಸಲಾಗದ ಮಟ್ಟಿಗೆ ನಾವು ದಾಟಿಬಿಟ್ಟಿದ್ದೇವೆ. ಮಕ್ಕಳು ಒಂದು ಮೊಬೈಲ್ ಬದಲು ಇದೀಗ ಎರೆಡೆರಡು ಮೊಬೈಲ್ಗಳನ್ನು ಬಳಸುವ ಹಂತಕ್ಕೆ ತಲುಪಿದ್ದಾರೆ. ಪೋಷಕರು ಮಕ್ಕಳ ಕೈಯಿಂದ ಮೊಬೈಲ್ ತಪ್ಪಿಸಿ ಪುಸ್ತಕ ಕೊಡುವಂತಾಗಬೇಕು.
ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ. ಅದನ್ನು ಒಪ್ಪಿಕೊಂಡೇ ಕನ್ನಡ ಭಾಷೆಯನ್ನು ಅಪಾಯದಿಂದ ಪಾರುಮಾಡಬೇಕಾಗಿದೆ. ಈ ಹೊತ್ತಿನಲ್ಲಿ ಕೇವಲ ಕನ್ನಡ ಭಾಷೆ ಮಾತ್ರವಲ್ಲ ಭಾರತೀಯ ಎಲ್ಲಾ ಭಾಷೆಗಳು ತಲ್ಲಣಗೊಂಡಿವೆ. ಇದರಿಂದ ರಕ್ಷಣೆಯ ಹೊಣೆಯು ನಮ್ಮದೇ ಆಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡೇ ಕನ್ನಡ ಉಳಿಯಬೇಕಾಗಿದೆ.
ಇದೇ ಸಂದರ್ಭದಲ್ಲಿ ಜಿ.ಕೆ.ರಮೇಶ್ ಅವರ ಇಂಡಿಯಾದ ಹೊರಗೊಂದು ಹಣಕು, ಮಲೆಸೀಮೆಯ ಕತೆಗಳು, ಬಿ.ಚಂದ್ರೇಗೌಡರ ದೇಶಾಂತರ ಕಾದಂಬರಿ, ಪ್ರೊ. ಸತ್ಯನಾರಾಯಣ ಅವರ ಅಂತರಂಗದ ಸುತ್ತ ಹನಿಗವನ ಸಂಕಲನ, ಡಾ.ಶ್ರೀಪತಿ ಹಳಗುಂದ ಅವರ ಚಿತ್ರಚಿಂತನ, ವಿಲೋಚನ ಪುಸ್ತಕಗಳು ಲೋಕಾರ್ಪಣೆಗೊಂಡವು.
ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಸಮ್ಮೇಳನಾಧ್ಯಕ್ಷ ಡಾ.ಎಸ್.ಪಿ.ಪದ್ಮಪ್ರಸಾದ್ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದರು.
ಎಂ.ನವೀನ್ಕುಮಾರ್ ಸ್ವಾಗತಿಸಿದರು. ಮಹಾದೇವಿ ನಿರೂಪಿಸಿದರು. ಸ್ವಾಮಿ ವಂದಿಸಿದರು.